ಒಂಟಿತನ ಹೋಗಲಾಡಿಸಲು 103ರ ಹರೆಯದಲ್ಲಿ 49ರ ಮಹಿಳೆಯ ಜೊತೆ ಮೂರನೇ ಮದುವೆಯಾದ ವೃದ್ಧ.!

ಶೇರ್ ಮಾಡಿ

ವಯಸ್ಸು 60 ದಾಟಿದರೆ ಸಾಕು ದೇಹದೊಳಗೆ ಒಂದೊಂದೆ ಕಾಯಿಲೆಗಳ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತದೆ. ಆರೋಗ್ಯವಾಗಿ ಇರಬೇಕೆನ್ನುವ ನಿಟ್ಟಿನಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಒಂದಲ್ಲ ಒಂದು ರೋಗ ನಮ್ಮ ದೇಹದೊಳಗೆ ಹೊಕ್ಕುತ್ತದೆ. ಇಲ್ಲೊಬ್ಬರ ವಯಸ್ಸು 103 ಆಗಿದೆ. ಈ ಸಮಯದಲ್ಲಿ ಇಂದೋ – ನಾಳೆಯೋ ಜೀವ ಬಿಡುವ ಸ್ಥಿತಿಯಲ್ಲಿ ಬಹುತೇಕರು ಇರುತ್ತಾರೆ. ಆದರೆ ಇಲ್ಲೊಬ್ಬರು ಈ ವಯಸ್ಸಿನಲ್ಲಿ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.!

ಹೌದು. ಕೇಳೋಕೆ ಶಾಕ್‌ ಆದರೂ ಭೋಪಾಲ್‌ನ ಇಟ್ವಾರದ ನಿವಾಸಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹಬೀಬ್ ನಜರ್ ಅವರು ತನ್ನ 103ನೇ ವಯಸ್ಸಿನಲ್ಲಿ ಮೂರನೇ ಮುದುವೆಯಾಗುವ ಮೂಲಕ ಹೊಸ ಬದುಕನ್ನು ಆರಂಭಿಸಿದ್ದಾರೆ. ಹಬೀಬ್‌ ಅವರು 49 ವರ್ಷದ ಫಿರೋಜ್‌ ಜಹಾನ್‌ ಅವರೊಂದಿಗೆ ವಿವಾಹವಾಗಿದ್ದಾರೆ.ಇವರ ವಿವಾಹ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದಂಪತಿಗೆ ಶುಭಹಾರೈಕೆಗಳು ಕೇಳಿ ಬರುತ್ತಿದೆ.

ಈ ಬಗ್ಗೆ ಮಾತನಾಡುವ ಹಬೀಬ್‌, “ನನಗೆ 103 ವರ್ಷ ಮತ್ತು ನನ್ನ ಹೆಂಡತಿಗೆ 49. ನಾನು ನಾಸಿಕ್‌ನಲ್ಲಿ ಮೊದಲ ಮದುವೆಯಾದೆ. ಅವಳು ತೀರಿಕೊಂಡ ಬಳಿಕ ಮತ್ತೊಂದು ಮದುವೆಯನ್ನು ಲಕ್ನೋದಲ್ಲಿ ಆದೆ. ಆದರೆ ಅವಳು ಕೂಡ ತೀರಿ ಹೋದ ಬಳಿಕ ನಾನು ಒಂಟಿ ಆಗಿದ್ದೆ. ನನ್ನನ್ನು ಒಂಟಿತನ ಕಾಡುತ್ತಿತ್ತು. ಜಹಾನ್‌ ಅವರು ಕೂಡ ಒಂಟಿಯಾಗಿದ್ದರು. ಅವರು ನನ್ನೊಂದಿಗೆ ಮದುವೆಯಾಗಲು ಒಪ್ಪಿದರು” ಎಂದು ಹೇಳುತ್ತಾರೆ.

“ನಾನು ಸಂತೋಷವಾಗಿದ್ದೇನೆ ಮತ್ತು ಮದುವೆಯಾಗಲು ಯಾರೂ ತನ್ನನ್ನು ಒತ್ತಾಯಿಸಲಿಲ್ಲ. ನನ್ನ ಪತಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲ” ಜಹಾನ್‌ ಹೇಳಿದ್ದಾರೆ.

ಕೆಲವೊಂದು ವರದಿಗಳ ಪ್ರಕಾರ 2023ರಲ್ಲೇ ಇವರು ವಿವಾಹವಾಗಿದ್ದು, ಇತ್ತೀಚೆಗೆ ಈ ವಿಚಾರ ವೈರಲ್‌ ಆಗಿದೆ ಎನ್ನಲಾಗಿದೆ.

Leave a Reply

error: Content is protected !!