ನೆಲ್ಯಾಡಿ: ವಿದ್ಯಾರ್ಥಿಯಾದವನು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಅದರಲ್ಲೂ ತನಗಿರುವ ಹೆಚ್ಚಿನ ಆಸಕ್ತಿಯ ಬಗ್ಗೆ ಒತ್ತುಕೊಟ್ಟು ಜೀವನ ಬರಿತವಾದ ಕೌಶಲ್ಯದಿಂದ ಕೂಡಿದ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ವಿದ್ಯೆಯೊಂದಿಗೆ ತನ್ನ ಪ್ರತಿಭೆಯನ್ನು ಇಂತಹ ವಿದ್ಯಾ ಸಂಸ್ಥೆಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವುದರಿಂದ ಸದೃಢವಾಗಿ ಬೆಳೆಯಲು ಸಾಧ್ಯ ಇಂದು ಕಡಬ ಉಪತಹಶೀಲ್ದಾರರಾದ ಗೋಪಾಲ್.ಕೆ ಹೇಳಿದರು.
ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ಇದರ ಎರಡನೇ ವರ್ಷದ ವಾರ್ಷಿಕೋತ್ಸವ ರಾಗಾಂತರಂಗ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆಲ್ಯಾಡಿ ಸೈಂಟ್ ಅಲ್ಫೋನ್ಸ ಚರ್ಚ್ ನ ಧರ್ಮಗುರುಗಳಾದ ರೆ. ಫಾ. ಶಾಜಿ ಮ್ಯಾತ್ಯು ಮಾತನಾಡಿ ನಮ್ಮ ಮನಸ್ಸಿನಲ್ಲಿರುವ ತಮೋ ಗುಣಗಳಾದ ರಾಗ, ದ್ವೇಷಗಳನ್ನು ಹೋಗಲಾಡಿಸಲು ಇರುವ ಸರಳ ವಿಧಾನ ಸಂಗೀತ, ನಾಟಕ ಮುಂತಾದವುಗಳು, ಇವುಗಳು ಸಮಾಜದಲ್ಲಿರುವ ದ್ವೇಷಗಳನ್ನು ಮನಸ್ಸಿನಿಂದ ಹೋಗಲಾಡಿಸಲು ಸಹಾಯಕವಾಗಿದೆ. ಸಂಗೀತ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಇಳಿಯ ವಯಸ್ಸಿನಲ್ಲಿ ಗೌರವಿಸಿ ಸನ್ಮಾನಿಸುವುದು ಸಂತೋಷದ ವಿಷಯ. ಇಂಥ ಸಂಗೀತ ಶಾಲೆಗಳಿಂದ ನಮ್ಮ ನಾಡು ಶಾಂತಿಯಿಂದ, ಪ್ರೀತಿಯಿಂದ, ನೆಮ್ಮದಿಯಿಂದ ಬೆಸುಗೆಯಿಂದ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ಅಧ್ಯಕ್ಷ ಸತೀಶ್ ಕೆಎಸ್ ದುರ್ಗಾಶ್ರೀ, ನೆಲ್ಯಾಡಿ ಜೇಸಿಐ ಅಧ್ಯಕ್ಷರಾದ ಸುಚಿತ್ರಾ.ಜೆ ಬಂಟ್ರಿಯಲ್, ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಕ್ಷಿಪ್ತ ನೃತ್ಯ ಕಲಾ ಶಾಲೆ ನೆಲ್ಯಾಡಿ- ಮಂಗಳೂರು ಇದರ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಸುರೇಖ ಹರೀಶ್ ಇವರಿಗೆ ಲಹರಿ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ವಾನ್ ಶ್ರೀಕಾಂತ ಸಂಗೀತ ಗುರುಗಳು ಕುದ್ಮಾರು, ಡಾ. ರಾಮಕೃಷ್ಣ ಭಟ್ ಅಂಜರ ಆಯುರ್ವೇದ ವೈದ್ಯರು, ಸಂಗೀತ ಕಲಾವಿದರು, ಶ್ರೀಮತಿ ಕಮಲ ದೈವಾರಾಧನೆ ಪಾಡ್ದನ, ಜೆ. ಮಾಧವ ಆಚಾರ್ಯ ಬಲ್ಯ, ಹಾರ್ಮೋನಿಯಂ ಕಲಾವಿದರು, ಸುಂದರ ಗೌಡ ಯಕ್ಷಗುರುಗಳು, ಲತೀಶ್ ಯಕ್ಷಗಾನ ಕಲಾಕೇಂದ್ರ ಅರಸಿನಮಕ್ಕಿ ಇವರನ್ನು ಸನ್ಮಾನಿಸಲಾಯಿತು.
ವಿ.ಕೆ. ಜೋಡಿ ತಾರೆ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ್ ಸುಳ್ಯ ಮತ್ತು ನವ್ಯಶ್ರೀ ನಿರೂಪಿಸಿದರು. ಕಲಾ ಕೇಂದ್ರದ ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ.ಕೆ ಸ್ವಾಗತಿಸಿದರು. ಕಲಾ ಕೇಂದ್ರ ನಿರ್ದೇಶಕ ಪ್ರಶಾಂತ್ ಸಿ.ಎಚ್ ವಂದಿಸಿದರು.
ಬಳಿಕ ವೇದಿಕೆಯಲ್ಲಿ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಸುಗಮ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.