ಬಲ್ಯ-ಪಟ್ಟೆ: ಉಚಿತ ನೇತ್ರ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ

ಶೇರ್ ಮಾಡಿ

ನೆಲ್ಯಾಡಿ: ಸರಕಾರಿ ಕಿ.ಪ್ರಾ.ಶಾಲೆ ಬಲ್ಯ-ಪಟ್ಟೆ ಶಾಲಾಭಿವೃದ್ಧಿ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಲ್ಯ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಕಡಬ, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇವುಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಬಲ್ಯ-ಪಟ್ಟೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ನಡೆಯಿತು. ಇದೇ ವೇಳೆ ಆನಂದಾಶ್ರಮದ ವತಿಯಿಂದ ಉಚಿತ ಕನ್ನಡಕ ವಿತರಣೆ ನಡೆಯಿತು.

ಪ್ರಗತಿಪರ ಕೃಷಿಕರಾದ ರಾಮಕೃಷ್ಣ ಎಡಪಡಿತ್ತಾಯ ಅವರು ಶಿಬಿರ ಉದ್ಘಾಟಿಸಿದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಶಾಂತರಾಜ್‌ರವರು ಶಿಬಿರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿದ್ದ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಬಲ್ಯಪಟ್ಟೆ ಶಾಲಾ ಮುಖ್ಯಗುರು ಶಿವಣ್ಣ, ಪ್ರಗತಿಪರ ಕೃಷಿಕರೂ, ಸಾಮಾಜಿಕ ಮುಖಂಡರೂ ಆದ ಪುರುಷೋತ್ತಮ ಗೌಡ ಪನ್ಯಾಡಿ, ಊರಿನ ಗುರಿಕಾರರಾದ ಪುತ್ತಿಲ ವಿಶ್ವನಾಥ ಗೌಡ, ಒಕ್ಕೂಟದ ಅಧ್ಯಕ್ಷ ಚಂದ್ರಹಾಸ ಬೀರುಕ್ಕು, ಕುಟ್ರುಪಾಡಿ ಗ್ರಾ.ಪಂ.ಉಪಾಧ್ಯಕ್ಷೆ ವಾಣಿನಾಗೇಶ್ ಬನಾರಿ, ಸದಸ್ಯರಾದ ಸುದೇಶ್ ಬೀರುಕ್ಕು, ಮೀನಾಕ್ಷಿ ಗುಣಪಾಲಗೌಡ, ನೆಲ್ಯಾಡಿ ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಬಾಕಿಲ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ ಗೌಡ ಕೊಡಂಗೆ ಅಧ್ಯಕ್ಷತೆ ವಹಿಸಿದ್ದರು. ಕುಟ್ರುಪಾಡಿ ಗ್ರಾ.ಪಂ.ಮಾಜಿ ಸದಸ್ಯ ಧನಂಜಯ ಕೊಡಂಗೆ ಸ್ವಾಗತಿಸಿದರು. ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ ನಿರೂಪಿಸಿದರು. ಶಾಲಾ ಮುಖ್ಯಗುರು ಶಿವಣ್ಣ ವಂದಿಸಿದರು. ಶಿಕ್ಷಕಿಯರಾದ ಸುಮಾ ಟಿ.ಬನಾರಿ, ಕವಿತಾ ಪಟ್ಟೆ, ಊರಿನ ಪ್ರಮುಖರಾದ ರಮೇಶಗೌಡ ನಾಲ್ಗುತ್ತು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ರಾಮಯ್ಯ ರೈ ಬೆದ್ರಾಡಿ, ಜಗನ್ನಾಥ ರೈ ಗುತ್ತು ಸಹಕರಿಸಿದರು. ಶಿಬಿರದಲ್ಲಿ 140ಕ್ಕೂ ಮಿಕ್ಕಿ ಸಾರ್ವಜನಿಕರು ನೇತ್ರ ತಪಾಸಣೆಯನ್ನು ಮಾಡಿಸಿಕೊಂಡರು. 120 ಕನ್ನಡಕಗಳನ್ನು ಆನಂದಾಶ್ರಮದ ಮೂಲಕ ವಿತರಿಸಲಾಯಿತು. 6ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ 1 ಲಕ್ಷಕ್ಕೂ ಮಿಕ್ಕಿ ಕನ್ನಡಕಗಳನ್ನು ಉಚಿತವಾಗಿ ವಿತರಿಸಿದ ಪುತ್ತೂರು ಆನಂದಾಶ್ರಮದ ಡಾ.ಗೌರಿ ಪೈ ಮತ್ತು 51ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಹೊಸಮನೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾಧರ ಶೆಟ್ಟಿಯವರು, ಡಾ.ಗೌರಿ ಪೈ ಅವರ ಮಾರ್ಗದರ್ಶನದೊಂದಿಗೆ ಗ್ರಾಮೀಣ ಭಾಗದ ಮೂಲೆಮೂಲೆಗಳಲ್ಲಿ 51 ಶಿಬಿರಗಳನ್ನು ನಡೆಸಲು ಸಾಧ್ಯವಾಯಿತು. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ 500ಕ್ಕೂ ಮಿಕ್ಕಿ ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆಯ ಮೂಲಕ ಬೆಳಕನ್ನು ನೀಡುವ ಯೋಗ ನಮಗೆ ಬಂದಿದೆ. 20ಸಾವಿರಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡಿದ್ದು 10 ಸಾವಿರಕ್ಕೂ ಮಿಕ್ಕಿ ಜನರಿಗೆ ಕನ್ನಡಕ ವಿತರಣೆ ಮಾಡಲಾಗಿದೆ. ಮುಂದೆ 100 ಶಿಬಿರ, 1 ಸಾವಿರಕ್ಕೂ ಮಿಕ್ಕಿ ಜನರಿಗೆ ಬೆಳಕನ್ನು ಕೊಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.

Leave a Reply

error: Content is protected !!