ಮದುವೆಯಾಗಲು ಹೆಣ್ಣು ಸಿಗದೇ ಬೇಸತ್ತಿದ್ದ ಮಧ್ಯಪ್ರದೇಶದ 29 ವರ್ಷದ ಯುವಕನೊಬ್ಬ ಕಡೆಗೂ ತನಗಾಗಿ ವಧುವನ್ನು ಹುಡುಕುವಲ್ಲಿ ವಿಶಿಷ್ಟ ವಿಧಾನವನ್ನು ಅನುಸರಿಸಿದ್ದಾನೆ. ತನ್ನ ಹೆಸರಿನಿಂದ ಹಿಡಿದು ತನ್ನೆಲ್ಲಾ ಮಾಹಿತಿಗಳನ್ನೊಳಗೊಂಡ ಬ್ಯಾನರ್ ಒಂದನ್ನು ತಯಾರಿಸಿ ತನ್ನ ಆಟೋ ರಿಕ್ಷಾಕ್ಕೆ ಅಂಟಿಸಿಕೊಂಡಿದ್ದಾನೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ದೀಪೇಂದ್ರ ರಾಥೋಡ್ (29) ಸಾಕಷ್ಟು ವರ್ಷಗಳಿಂದ ವಧು ಹುಡುಕಾಟದ ಹಲವಾರು ಆ್ಯಪ್ಗಳನ್ನು ಬಳಸಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಮದುವೆಯಾಗುವ ಆಸೆಯನ್ನೇ ಬಿಟ್ಟಿದ್ದ. ಇದೀಗಾ ಹೊಸ ಪ್ಲಾನ್ ಒಂದನ್ನು ತಯಾರಿಸಿದ್ದು, ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾನೆ.ಇದಲ್ಲದೇ ತಾನು ಯಾವುದೇ ಜಾತಿ, ಧರ್ಮದ ಮಹಿಳೆಯನ್ನು ಮದುವೆಯಾಗಲು ಸಿದ್ಧನಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ದೀಪೇಂದ್ರ ರಾಥೋಡ್ ಇಂಡಿಯಾ ಟುಡೇ ಜೊತೆ ಮಾತನಾಡಿ “ಸಮಾಜದಲ್ಲಿ ಮಹಿಳೆಯರ ಕೊರತೆ” ಯಿಂದಾಗಿ ಹೆಣ್ಣು ಹುಡುಕಲು ಕಷ್ಟವಾಗುತ್ತಿದೆ. ಜಾತಿ ಅಥವಾ ಧರ್ಮದ ವ್ಯತ್ಯಾಸವು ನನಗೆ ಸಮಸ್ಯೆಯಿಲ್ಲ ಮತ್ತು ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾನೆ.
ಆಟೋ ರಿಕ್ಷಾಕ್ಕೆ ಅಂಟಿಸಲಾಗಿರುವ ಪೋಸ್ಟರ್ನಲ್ಲಿ ದೀಪೇಂದ್ರ ರಾಥೋಡ್ ಅವರ ಎತ್ತರ, ಹುಟ್ಟಿದ ದಿನಾಂಕ ಮತ್ತು ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆಗಳು, ‘ಗೋತ್ರ’ ಇತ್ಯಾದಿ ವಿವರಗಳಿವೆ. ರಾಥೋಡ್ ಅವರು ಪ್ರಸ್ತುತ ತಮ್ಮದೇ ಇ-ರಿಕ್ಷಾವನ್ನು ಓಡಿಸುವ ಮೂಲಕ ತಮ್ಮ ಕುಟುಂಬ ನಡೆಸುತ್ತಿದ್ದಾರೆ.