ಮಾ.1 ರಿಂದ ದ್ವಿತೀಯ ಪಿಯುಸಿ, ಮಾ.25 ರಿಂದ SSLC ಪರೀಕ್ಷೆ – ಏನು ಬದಲಾವಣೆ?

ಶೇರ್ ಮಾಡಿ

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಪಬ್ಲಿಕ್ ಪರೀಕ್ಷೆ-1 ಗೆ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಸಿದ್ದತೆ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ಮಾರ್ಚ್ 1 ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮಾರ್ಚ್‌ 25 ರಿಂದ ಏಪ್ರಿಲ್ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1,124 ಕೇಂದ್ರಗಳಲ್ಲಿ ನಡೆದರೆ, 2,747 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6,98,624 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಈ ಪೈಕಿ ಬಾಲಕರು 3,30,644, ಬಾಲಕಿಯರು 3,67,980 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8,96,271 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 4,58,427 ಬಾಲಕರು, 4,37,844 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಈ ವರ್ಷ ಶಿಕ್ಷಣ ಇಲಾಖೆ ಬದಲಾವಣೆ ಮಾಡಿದೆ. ಅಂಕ ಮಾದರಿಯಲ್ಲಿ ಬದಲಾವಣೆ ಮಾಡಿದ್ದು, 80+20 ಅಂಕ ಮಾದರಿ ಜಾರಿ ಮಾಡುತ್ತಿದೆ. 80 ಅಂಕ ಲಿಖಿತ ಪರೀಕ್ಷೆ. ಆಂತರಿಕ ಮೌಲ್ಯಮಾಪನಕ್ಕೆ 20 ಅಂಕ ನಿಗದಿ ಮಾಡಲಾಗಿದೆ.

ಈಗಾಗಲೇ 2015ರಿಂದಲೇ‌ ಎಸ್‌ಎಸ್‌ಎಲ್‌ಸಿಯಲ್ಲಿ 80+20 ಅಂಕ ಮಾದರಿ ಜಾರಿ ಮಾಡಲಾಗಿದ್ದು,‌ ಈ ವರ್ಷದಿಂದ ದ್ವಿತೀಯ ಪಿಯುಸಿಯಲ್ಲೂ 80+20 ಅಂಕ ಮಾದರಿ ಜಾರಿ ಮಾಡಲಾಗುತ್ತಿದೆ. ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಗೆ ಮೂರು ಪಬ್ಲಿಕ್ ಪರೀಕ್ಷೆ ನಡೆಯಲಿದೆ. ಮೂರು ಪರೀಕ್ಷೆಗೂ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ವಿದ್ಯಾರ್ಥಿಯು ಮೂರು ಪರೀಕ್ಷೆ ಬರೆದರೆ ಮೂರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದ ಫಲಿತಾಂಶವನ್ನು ಪರಿಗಣನೆ ಮಾಡಲಾಗುತ್ತದೆ.

ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಿಜಬ್‌ಗೆ ನಿಷೇಧ ಹಾಕಲಾಗಿತ್ತು. ಈ ಬಾರಿ ಪರೀಕ್ಷೆಗೆ ಹಿಜಬ್‌ಗೆ ಅವಕಾಶ ಇದೆಯಾ ಇಲ್ಲವಾ ಎಂಬ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಈ‌ ಬಗ್ಗೆ ಮಾತನಾಡಿದ ಸಚಿವರು, ಸುಪ್ರೀಂಕೋರ್ಟ್ ನಲ್ಲಿ ಕೇಸ್ ಇದೆ. ಕೋರ್ಟ್ ನಿರ್ದೇಶನದಂತೆ ಡ್ರೆಸ್ ಕೋಡ್ ಫಾಲೋ ಮಾಡಲಾಗುತ್ತದೆ. ಸಮವಸ್ತ್ರ ಧರಿಸಿಕೊಂಡು ಬರಬೇಕು. ಹಿಜಾಬ್ ಅವಕಾಶ ವಿಚಾರದಲ್ಲಿ ಬಗ್ಗೆ ಚರ್ಚೆ ಮಾಡಿ ಮುಂದೆ ನಿರ್ಧಾರ ಹೇಳುತ್ತೇವೆ ಎಂದರು.

ಈ‌ ಬಾರಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯ ಮಾಹಿತಿ ಒಳಗೊಂಡ ಪೋಸ್ಟರ್ ಸಿದ್ದ ಪಡಿಸಲಾಗಿದೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತುರ್ತಾಗಿ ಅಂಕಪಟ್ಟಿ ಬೇಕಿದ್ದಲ್ಲಿ DG ಲಾಕರ್ ನಿಂದ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ.

Leave a Reply

error: Content is protected !!