ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕಿದುವಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ಮಾ.11ರಂದು ರೈತ ಸಮ್ಮೇಳ ನಡೆಯಲಿದೆ ಎಂದು ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ತಿಳಿಸಿದರು.
ಅವರು ಕಿದುವಿನ ಸಿಪಿಸಿಆರ್ಐ ಕೇಂದ್ರದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿಪಿಸಿಆರ್ಐ ಸಂಸ್ಥೆ ಈಗಾಗಲೇ ಕೃಷಿ ಬೆಳೆಗಳ ಸಂಶೋಧನೆಯಲ್ಲಿ ತೊಡಗಿಕೊಂಡು ಕೃಷಿಕರು, ರೈತರಿಕೆ ಪೂರಕವಾದ ಕೆಲಸ ಮಾಡುತ್ತಿದ್ದು, ಮಾ.11ರಂದು ಕಿದುವಿನಲ್ಲಿ ನಡೆಯುವ ರೈತ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ ಗಂಟೆ 11ಕ್ಕೆ ನಡೆಯಲಿದೆ. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಕಿದುವಿನಲ್ಲಿ ನೀರಾವರಿ ಮೂಲಸೌಕರ್ಯಕ್ಕೆ ಪೂರಕವಾಗಿ 20 ಲಕ್ಷ ಲೀಟರ್ ಸಾಮಾರ್ಥ್ಯದ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣಗೊಂಡಿದ್ದು ಸಚಿವೆ ಶೋಭಾ ಕರಂದ್ಲಾಜೆ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ರೈತ ಸಮ್ಮೇಳನದಲ್ಲಿ ಅಡಿಕೆ, ತೆಂಗು ಮತ್ತು ಕೊಕ್ಕೋ ಬೆಳೆಗಳ ಇತ್ತೀಚಿನ ಪ್ರಮುಖ ಕೀಟಗಳು ಹಾಗೂ ರೋಗಗಳ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಜಾಗೃತಿ, ರೈತ ಬೆಂಬಲ ಯೋಜನೆಗಳು/ ಉಪಕ್ರಮಗಳು, ಮಣ್ಣಿನ ಆರೋಗ್ಯ ನಿರ್ವಹಣೆ, ಕೋಕ್ಕೋವನ್ನು ಅಂತರ ಬೆಳೆಯಾಗಿ ಬೆಳೆಯುವುದರ ಅನುಕೂಲಗಳು, ರೈತ-ವಿಜ್ಞಾನಿ ಸಮಾವೇಶ ಕಾರ್ಯಗಳು ಮುಂತಾದ ತಾಂತ್ರಿಕ ಉಪನ್ಯಾಸ ನಡೆಯಲಿದೆ. ಸಂಸ್ಥೆಯ ತಂತ್ರಜ್ಞಾನ ಗಳ ಪ್ರದರ್ಶನ ನಡೆಯಲಿದೆ ಎಂದರು.
ರೈತರು ತಮ್ಮಪ್ರಮುಖ ಬೆಳೆಗಳ ಜೊತೆಗೆ ಇತರೆ ಉಪಬೆಳೆಗಳನ್ನು ಹೊಂದಾಣಿಕೆಯೊಂದಿಗೆ ಬೆಳೆದಲ್ಲಿ ಒಂದೊಮ್ಮೆ ಒಂದೊಂದು ಬೆಳೆಗಳಿಂದ ಉತ್ತಮ ಆದಾಯ ಬರುವ ವೇಳೆ ಆದಾಯ ಗಳಿಸಲು ಸಾಧ್ಯವಿದೆ. ಈ ಬಗ್ಗೆ ಕೃಷಿಕರು ಮುಂದಾಗಬೇಕಿದೆ ಎಂದರು. ಕಾಲಕ್ರಮದಲ್ಲಿ ಸುಮಾರು 2000ಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆಗೆ ಕ್ರಮ:
ಅಡಿಕೆಯಲ್ಲಿ ಬಾಧಿಸಿರುವ ಎಲೆಚುಕ್ಕಿ ರೋಗದ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಲಾಗಿದ್ದು ಪರಿಹಾರವನ್ನು ಕಂಡುಹಿಡಿಯಲಾಗಿದೆ. ಇದು ಹವಾಮಾನ ಆಧಾರಿತ ರೋಗ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈಗಾಗಲೇ ರೋಗ ನಿಯಂತ್ರಣಕ್ಕೆ ಕಂಡುಹಿಡಿಯಲಾದ ಔಷಧಿಯನ್ನು (ರಾಸಾಯನಿಕ ಸಿಂಪಡಣೆ) ಕೇಂದ್ರಕ್ಕೆ ಕಳುಹಿಸಿ ಒಪ್ಪಿಗೆ ಪಡೆದಿದ್ದೇವೆ. ಅಲ್ಲಿಂದ ಅದನ್ನು ಎಲ್ಲರಿಗೂ ತಲುಪಿಸಲು ತಿಳಿಸಿದ್ದಾರೆ ಅದರಂತೆ ನಡೆಯುತ್ತಿದೆ. ನಾವು ಇದೀಗ ಎಲೆಚುಕ್ಕಿ ರೋಗದ ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಅಡಿಕೆ ಹಳದಿ ರೋಗ ಕ್ಯಾನ್ಸರ್ ನಂತೆ. ಮೊದಲ ಅಥವಾ ಎರಡನೇ ಹಂತದಲ್ಲಿ ನಿಯಂತ್ರಣ ಸಾಧ್ಯವಾದರೆ ಮಾತ್ರ ರೋಗ ನಿಯಂತ್ರಿಸಬಹುದಾಗಿದೆ. ಬಳಿಕ ಅದರ ನಿಯಂತ್ರಣ ಸಾಧ್ಯ ಕಷ್ಟ. ಅಡಿಕೆ ಹಳದಿ ರೋಗಕ್ಕೆ ಕಾರಣದ ಬಗ್ಗೆ ಇನ್ನೂ ನಿಖರತೆ ಕಂಡುಬಂದಿಲ್ಲ ಎಂದು ಅವರು ತಿಳಿಸಿದರು.
ಸಿಪಿಸಿಆರ್ಐ ಕಾಸರಗೋಡಿನ ಡಾ.ನಿರಲ್, ಸಿಪಿಸಿಆರ್ಐ ವಿಟ್ಲದ ಡಾ.ವಿನಾಯಕ ಹೆಗ್ಡೆ, ಕಾಸರಗೋಡು ಸಿಪಿಸಿಆರ್ಐ ಪ್ರಧಾನ ವಿಜ್ಞಾನಿಗಳಾದ ಡಾ.ರವಿ ಭಟ್, ಡಾ.ಸಂಶುದ್ದೀನ್, ಪ್ರಮುಖರಾದ ಶ್ಯಾಮ್ ಪ್ರಸಾದ್, ಗೋಪಾಲಕೃಷ್ಣ, ಡಾ.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.