ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚಿಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದಾರೋ… ಇಲ್ಲವೋ.. ಇದ್ದರೂ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಸ್ಥಳಿಯರು ಹಾಗೂ ಸಾರ್ವಜನಿಕರನ್ನ ಕಾಡುತ್ತಿದೆ.
ಏಕೆಂದರೆ, ಕಳೆದ ಮಾರ್ಚ್ 18ರಂದು ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ 16 ಚಕ್ರದ ಸಿಮೆಂಟ್ ಲಾರಿ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಲಾಕ್ ಆಗಿ ಮಂಗಳೂರು ಹಾಗೂ ಚಿಕ್ಕಮಗಳೂರು ಎರಡೂ ಮಾರ್ಗದಲ್ಲೂ ಮೂರ್ನಾಲ್ಕು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಇಂದು ಮತ್ತೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್ ಆಗಿದೆ. ರಸ್ತೆಯ ತಿರುವಿನಲ್ಲಿ ಲಾರಿ ಟರ್ನ್ ಆಗದೆ ನಿಂತಲ್ಲಿ ನಿಂತಿದೆ. ಬೆಳಗ್ಗೆಯಿಂದಲೂ ಕೂಡ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ನಿಂತಲ್ಲೇ ನಿಂತು ಮುಂದೆ ಹೋಗಲಾಗದೆ ಹಿಂದೆಯೂ ಬರಲಾಗದೆ ಪರದಾಡುವಂತೆ ಆಗಿದೆ.
ಬಳ್ಳಾರಿಯಿಂದ ಸರಕನ್ನ ತುಂಬಿಕೊಂಡು ಮಂಗಳೂರಿಗೆ ಹೋಗುತ್ತಿದ್ದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಲಾಕ್ ಆಗಿರೋದ್ರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಹತ್ತು ಚಕ್ರದ ಬಸ್ಸು ಹಾಗೂ ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಸರ್ಕಾರದ ಅಧಿಕೃತ ಆದೇಶವಿದ್ದರೂ ಕೂಡ ಅಪಾಯಕಾರಿ ತಿರುವಿನ ಚಾರ್ಮಾಡಿ ಘಾಟಿಯಲ್ಲಿ ಅಷ್ಟು ದೊಡ್ಡ ವಾಹನಗಳು ಹೇಗೆ ಹೋಗಿದ್ದಾವೆ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಮಂಗಳೂರು ಹಾಗೂ ಚಿಕ್ಕಮಗಳೂರು ಗಡಿಯಾಗಿರುವ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಾಗೂ ಇತರೆ ಅಧಿಕಾರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರುಗಳ ಕಣ್ಣುಗಳನ್ನು ತಪ್ಪಿಸಿ 12 ಚಕ್ರದ ಲಾರಿ ಹೇಗೆ ಹೋಯಿತು ಅನ್ನೋದು ಸ್ಥಳೀಯರ ಅನುಮಾನಕ್ಕೂ ಕಾರಣವಾಗಿದೆ. ಸರ್ಕಾರದ ಅಧಿಕೃತ ಆದೇಶವಿದ್ದರೂ ಕೂಡ ಪೊಲೀಸರೇ ಲಾರಿಗಳನ್ನು ಬಿಡುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆರೋಪಿಸಿದ್ದಾರೆ. ಚಾರ್ಮಾಡಿ ಘಾಟಿಯನ್ನ ಬದುಕಿನ ದಾರಿ ಎಂದು ಕರೆಯುತ್ತಾರೆ. ನಿತ್ಯ ಈ ಮಾರ್ಗದಲ್ಲಿ ರೋಗಿಗಳನ್ನ ಹೊತ್ತ ಹಲವು ಆಂಬುಲೆನ್ಸ್ ಗಳು ಕೂಡ ಉಡುಪಿ ಹಾಗೂ ಮಂಗಳೂರಿಗೆ ಹೋಗುತ್ತವೆ. ಹೀಗೆ ಬಾರಿ ವಾಹನದಿಂದ ಟ್ರಾಫಿಕ್ ಜಾಮ್ ಉಂಟಾದರೆ ಆಂಬುಲೆನ್ಸ್ ಕೂಡ ಹೇಗೆ ಹೋಗೋದು ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ. ಹಾಗಾಗಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಸ್ಥಳೀಯರು ಹಾಗೂ ವಾಹನ ಸವಾರರು ಕೂಡಲೇ ಚಾರ್ಮಾಡಿ ಘಾಟಿಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.