ಕೊಕ್ಕಡ:: ಮನೆ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಕೊಕ್ಕಡ ಗ್ರಾಮದ ಬರಮೇಲು ನಿವಾಸಿ ಫ್ರಾನ್ಸಿಸ್ ಫೆರ್ನಾಂಡಿಸ್(68ವ.)ರವರು ಮೃತಪಟ್ಟವರಾಗಿದ್ದಾರೆ.
ಫ್ರಾನ್ಸಿಸ್‌ರವರು ಎ.7ರಂದು ಸಂಜೆ ಕೊಕ್ಕಡ-ಪೆರಿಯಶಾಂತಿ ರಸ್ತೆಯ ಬಲಬದಿಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬರಮೇಲು ಎಂಬಲ್ಲಿ ಪೆರಿಯಶಾಂತಿ ಕಡೆಯಿಂದ ಕೊಕ್ಕಡಕ್ಕೆ ಬರುತ್ತಿದ್ದ ದ್ವಿಚಕ್ರ(ಕೆಎ19, ಹೆಚ್‌ಎ9528) ವಾಹನ ಡಿಕ್ಕಿಯಾಗಿತ್ತು. ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಫ್ರಾನ್ಸಿಸ್ ಫೆರ್ನಾಂಡಿಸ್‌ರವರಿಗೆ ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಎ.8ರಂದು ಅಲ್ಲಿನ ವೈದ್ಯರು ಫ್ರಾನ್ಸಿಸ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ನವೀನ್ ಫೆರ್ನಾಂಡಿಸ್‌ರವರು ಎ.9ರಂದು ಫ್ರಾನ್ಸಿಸ್‌ರನ್ನು ಮಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ನಿರ್ಧರಿಸಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಎ.8ರ ಸಂಜೆ ವೇಳೆ ಫ್ರಾನ್ಸಿಸ್ ಫೆರ್ನಾಂಡಿಸ್‌ರವರಿಗೆ ನೋವು ಉಲ್ಬಣಗೊಂಡಿದ್ದು ಮನೆಯವರು ಕೂಡಲೇ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದ ವೇಳೆ ಫ್ರಾನ್ಸಿಸ್ ಫೆರ್ನಾಂಡಿಸ್‌ರವರು ಮೃತಪಟ್ಟಿದ್ದರು.
ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಅಬ್ದುಲ್ ಖಾದರ್‌ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಸಹ ಸವಾರ ಫಾರಿಜ್‌ರವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪುತ್ರ ನವೀನ್ ಫೆರ್ನಾಂಡಿಸ್‌ರವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 41/2024 ಕಲಂ: 279,337 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.