ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75 ಅಡ್ಡಹೊಳೆಯಿಂದ ಬಿಸಿ ರೋಡ್ ವರೆಗೆ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು. ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡದೆ ವಿಪರೀತ ಸುರಿದ ಮಳೆಯಿಂದ ಮಳೆಯ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಸಮಸ್ಯೆಗೆ ಸಿಲುಕಿದ ಘಟನೆ ಮೇ.18ರಂದು ಸಂಜೆ ನಡೆದಿದೆ.
ಮಳೆ ಬರುವ ಮುನ್ಸೂಚನೆ ಇದ್ದರೂ ಗುತ್ತಿಗೆದಾರರು ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಇರುವುದು ಹಾಗೂ ಸರ್ವಿಸ್ ರೋಡ್ ನಿರ್ಮಾಣ ಮಾಡುವಾಗ ರಸ್ತೆಗಿಂತ ಎತ್ತರವಾಗಿ ಚರಂಡಿಯನ್ನು ನಿರ್ಮಿಸಿರುವುದರಿಂದ ನೀರು ರಸ್ತೆಯಲ್ಲಿ ಹರಿಯಲು ಕಾರಣವಾಗಿದೆ.
ಕಳೆದ ಎರಡು ವರ್ಷಗಳಿಂದಲೂ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಲೇ ಇದೆ ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸಾರ್ವಜನಿಕರು, ವರ್ತಕರು ತಿಳಿಸಿದರು ಯಾವುದೇ ಸ್ಪಂದನೆ ನೀಡದಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣವಾಗಿದೆ.
ಹೊಂಡ ಗುಂಡಿಗಳಿಂದ ಕೂಡಿದ ಅಂಡರ್ ಪಾಸ್
ಹೆದ್ದಾರಿಯ ಎರಡು ಕಡೆಗಳಲ್ಲಿ ಅಂಡರ್ ಪಾಸ್ ನಿರ್ಮಾಣಗೊಂಡಿದ್ದು ಇದರ ಮಧ್ಯೆ ಹೊಂಡ ಗುಂಡಿಗಳಿದ್ದು ಮಳೆಗಾಲದಲ್ಲಿ ಇಲ್ಲಿ ಸಂಪೂರ್ಣ ನೀರು ನಿಲ್ಲುವಂತಾಗಿದೆ.
ಇನ್ನಾದರೂ ಹೆದ್ದಾರಿ ಕಾಮಗಾರಿ ವಹಿಸಿಕೊಂಡವರು ಈಬಗ್ಗೆ ಗಮನಹರಿಸಿ ಮಳೆಗಾಲದಲ್ಲಿ ಆಗಬಹುದಾದ ಸಂಭಾವ್ಯ ಅನಾಹುತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚರಂಡಿ ನಿರ್ಮಾಣದ ಆರಂಭದಲ್ಲಿ ಗುತ್ತಿಗೆ ವಹಿಸಿಕೊಂಡವರಿಗೆ ನೀರಿನ ಹರಿವಿನ ಬಗ್ಗೆ ತಿಳಿಸಲಾಗಿತ್ತು. ಆದರೂ ಯಾವುದೇ ರೀತಿಯ ಸ್ಪಂದನೆ ನೀಡದೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ತೊಂದರೆ ಒಳಗಾಗಬೇಕಾಗಿದೆ.
-ಗಣೇಶ್ ರಶ್ಮಿ, ಉಪಾಧ್ಯಕ್ಷರು ವರ್ತಕ ಸಂಘ ನೆಲ್ಯಾಡಿ – ಕೌಕ್ರಾಡಿ