*ಚರಂಡಿ ತೆರವುಗೊಳಿಸುವಂತೆ ಮಹಿಳೆಯಿಂದ ಕಡಬ ತಹಶೀಲ್ದಾರ್, ಕೌಕ್ರಾಡಿ ಗ್ರಾ.ಪಂ.ಗೆ ಮನವಿ
ನೆಲ್ಯಾಡಿ: ನೆಲ್ಯಾಡಿ-ಕೊಕ್ಕಡ ರಸ್ತೆಯಲ್ಲಿ ಬರುವ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿ ಸ್ಥಳೀಯರು ಚರಂಡಿಗೆ ಮಣ್ಣು ತುಂಬಿಸಿ ಮುಚ್ಚಿರುವುದರಿಂದ ಮಳೆ ನೀರು ಕೃಷಿ ಭೂಮಿಗೆ ನುಗ್ಗಿ ಕೃಷಿ ನಾಶವಾಗುತ್ತಿದೆ. ಆದ್ದರಿಂದ ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಚರಂಡಿ ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ನೆಲ್ಯಾಡಿ ಗ್ರಾಮದ ಹೊಸವಕ್ಲು ನಿವಾಸಿ, ಹಿರಿಯ ನಾಗರಿಕರಾದ ಕಮಲಾಕ್ಷಿ(64ವ.) ಎಂಬವರು ಕಡಬ ತಹಶೀಲ್ದಾರ್ ಹಾಗೂ ಕೌಕ್ರಾಡಿ ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.
ಕಳೆದ ಸುಮಾರು 50ವರ್ಷಗಳ ಹಿಂದಿನಿಂದಲೂ ಮಳೆಗಾಲದಲ್ಲಿ ನೆಲ್ಯಾಡಿ-ಕೊಕ್ಕಡ ರಸ್ತೆಯ ಎರಡು ಬದಿಯಲ್ಲಿನ ಮಳೆನೀರು ಕಜೆಕಾಡ್ ಎಂಬಲ್ಲಿಗೆ ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸದ್ರಿ ರಸ್ತೆಯ ಪಶ್ಚಿಮ ಬದಿಯ ಚರಂಡಿಯನ್ನು ಪರಿಸರ ನಿವಾಸಿಗಳು ಮಣ್ಣು ತುಂಬಿಸಿ ಮುಚ್ಚಿರುವುದರಿಂದ ಮಳೆ ನೀರು ಪೂರ್ವಬದಿಯ ಚರಂಡಿಗೆ ಏಕಕಾಲದಲ್ಲಿ ಹರಿದು ಬರುತ್ತಿದೆ. ಇದರಿಂದಾಗಿ ನೀರಿಗೆ ತಡೆ ಉಂಟಾಗಿ ಸ್ಥಳೀಯ ಪರಿಸರದಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ಮಾತ್ರವಲ್ಲದೆ ಸದ್ರಿ ನೀರು ನನ್ನ ಕೃಷಿ ಭೂಮಿಗೆ ನುಗ್ಗಿ ಕೃಷಿ ನಾಶವಾಗುತ್ತಿದೆ. ಸದ್ರಿ ಭೂಮಿಯಲ್ಲಿರುವ ಕೃಷಿ ಉದ್ದೇಶಕ್ಕೆ ತೋಡಿರುವ ಕೆರೆ ಮುಚ್ಚಿ ಹೋಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಪರಿಸರದ ನಿವಾಸಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೌಕ್ರಾಡಿ ಗ್ರಾ.ಪಂ.ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಮಳೆಗಾಲದಲ್ಲಿ ಇಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ ಚರಂಡಿ ತೆರವು ಮಾಡಿಕೊಡುವಂತೆ ಅವರು ಇದೀಗ ಕಡಬ ತಹಶೀಲ್ದಾರ್ ಹಾಗೂ ಕೌಕ್ರಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.
70ಲಕ್ಷ ರೂ ನಲ್ಲಿ 385ಮೀ ಉದ್ದದ ವರೆಗೆ ರಸ್ತೆ ಡಾಮರೀಕರಣ:
ನೆಲ್ಯಾಡಿ ಪೇಟೆಯಿಂದ ಪುತ್ಯೆ ಮೂಲಕ ಕೊಕ್ಕಡ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ಸ್ಥಳೀಯರಲ್ಲದೆ ಮಾಧ್ಯಮ ಪ್ರತಿನಿಧಿಗಳು ರಸ್ತೆ ಕಾಮಗಾರಿ ನಡೆಸುವಂತೆ ಒತ್ತಡ ತರುತ್ತಿದ್ದರು. ಕೊನೆಗೆ 70 ಲಕ್ಷ ರೂ ಅನುದಾನ ಬಿಡುಗಡೆಗೊಂಡು 5.5ಮೀ ಅಗಲ, 385ಮೀ ಉದ್ದದ ವರೆಗೆ ಡಾಮರೀಕರಣ ಮಾಡಲಾಯಿತು. ಇದೀಗ ಮಳೆಗಾಲ ಆರಂಭವಾಗಿದ್ದು ರಸ್ತೆಯ ಒಂದು ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರಸ್ತೆಯು ಬೇಗನೆ ಹಾಳಾಗುವ ಸಾಧ್ಯತೆ ಅತಿ ಹೆಚ್ಚಾಗಿದೆ.
ನೆಲ್ಯಾಡಿ ಪೇಟೆಯಿಂದ ಪುತ್ಯೆ ಮೂಲಕ ಕೊಕ್ಕಡ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ಸ್ಥಳೀಯರಲ್ಲದೆ ಮಾಧ್ಯಮ ಪ್ರತಿನಿಧಿಗಳು ರಸ್ತೆ ಕಾಮಗಾರಿ ನಡೆಸುವಂತೆ ಒತ್ತಡ ತರುತ್ತಿದ್ದರು. ಕೊನೆಗೆ 70 ಲಕ್ಷ ರೂ ಅನುದಾನ ಬಿಡುಗಡೆಗೊಂಡು, 5.5ಮೀ ಅಗಲ, 385ಮೀ ಉದ್ದದ ವರೆಗೆ ಡಾಮರೀಕರಣ ಮಾಡಲಾಯಿತು. ಇದೀಗ ಮಳೆಗಾಲ ಆರಂಭವಾಗಿದ್ದು ರಸ್ತೆಯ ಒಂದು ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರಸ್ತೆಯು ಬೇಗನೆ ಹಾಳಾಗುವ ಸಾಧ್ಯತೆ ಅತಿ ಹೆಚ್ಚಾಗಿದೆ.
ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಈ ರೀತಿ ಅನಾಹುತವಾಗಲು ಕಾರಣವಾಗಿದೆ. ಹಿಂದೊಮ್ಮೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಸದ್ಯದಲ್ಲಿ ಸ್ಥಳೀಯರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆ ಹರಿಸಲಾಗುವುದು
– ಯಶವಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೌಕ್ರಾಡಿ