ಪ್ರೇತ ಮದುವೆ ಪುತ್ತೂರಿನ ವಧುವಿಗೆ ವರ ಬೇಕಾಗಿದೆ ಎಂಬ ಹುಡುಕಾಟದ ಜಾಹೀರಾತು ಸುದ್ದಿ ಈಗ ಅಂತ್ಯ ಕಂಡಿದೆ. ಕಾಸರಗೋಡು ಸಮೀಪದ ಬಾಯಾರು ಕಡೆಯ ವರ ನಿಗದಿಯಾಗಿದ್ದು, ಪ್ರೇತ ಮದುವೆ ಮುಂದಿನ ತಿಂಗಳಲ್ಲಿ ನಡೆಯಲಿದೆ.
1 ವಾರದ ಮಗು 30 ವರ್ಷಗಳ ಹಿಂದೆ ತೀರಿ ಹೋಗಿತ್ತು. ನಾಮಕರಣವೂ ಆಗಿರಲಿಲ್ಲ. ಆ ವ್ಯಕ್ತಿಗೆ ಈಗ ಪ್ರೇತ ಮದುವೆ ಮಾಡಲು ನಿರ್ಧರಿಸಲಾಗಿದೆ.
ಪತ್ರಿಕೆಯಲ್ಲಿ ಜಾಹೀರಾತು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.
ಜೀವಂತ ಇರುವಾಗ ಆಗದೇ ಇರುವ ಮದುವೆ ಕ್ರಮವನ್ನು ಜೀವಂತ ಇರುವ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತದೆ. ಮುಂದಿನ ರವಿವಾರ ಪ್ರೇತ ವರನ ಕಡೆಯವರು ವಧುವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎನ್ನುತ್ತಾರೆ ಪುತ್ತೂರು ನಿವಾಸಿ. ತುಳುನಾಡಿನ ನಂಬಿಕೆ ಇದು ಜಾಹೀರಾತು ಬಂದ ಮೇಲೆ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂತು. ತುಳುನಾಡಿನ ನಂಬಿಕೆಯ ಆಚರಣೆಗೆ ಎದುರಾಗಿದ್ದ ವಧು-ವರರ ಕೊರತೆ ಬಗ್ಗೆ ವಿವಿಧ ಸಮಾಜದ ಬಂಧುಗಳು ಪ್ರತಿಕ್ರಿಯಿಸಿದರು. ನಮ್ಮ ಮನೆಗೆ ಪ್ರೇತ ವರ ಬೇಕಾಗಿದ್ದ ಹಾಗೆಯೇ ನೂರಾರು ಮನೆಗೆ ವಧು-ವರ ಬೇಕಾಗಿದ್ದ ವಿಚಾರ ಆ ಸಂದರ್ಭ ಬೆಳಕಿಗೆ ಬಂತು. ಈ ಕುರಿತು ಜಾಗೃತಿಯೊಂದು ಮೂಡಿದಂತಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಮನೆಯವರು.