ಬೋಳಿಯಾರು ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿಯಿಂದ ಇರಿದ ಪ್ರಕರಣದ ಬೆನ್ನಲ್ಲೇ ಕೊಣಾಜೆ ಪೊಲೀಸರ ಬೇಜವಾಬ್ದಾರಿ ಪ್ರಶ್ನಿಸಿ, ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ತಡರಾತ್ರಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಕೊಣಾಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಕೇಂದ್ರದಲ್ಲಿ ಎನ್ ಡಿಎ ಸರಕಾರದ ಪ್ರಮಾಣ ವಚನ ಹಿನ್ನೆಲೆ ಬಿಜೆಪಿ ಬೋಳಿಯಾರು ಗ್ರಾಮ ಸಮಿತಿ ವತಿಯಿಂದ ಬೋಳಿಯಾರಿನಿಂದ ಧರ್ಮನಗರದವರೆಗೆ ವಿಜಯೋತ್ಸವ ರ್‍ಯಾಲಿ ಆಯೋಜಿಸಲಾಗಿತ್ತು.
ಈ ಸಂದರ್ಭ ಬೋಳಿಯಾರು ಮಸೀದಿ ಸಮೀಪ ಡಿಜೆ ಹಾಕದಂತೆ ತಂಡವೊಂದು ರ್‍ಯಾಲಿಯಲ್ಲಿದ್ದವರಿಗೆ ಸೂಚಿಸಿತ್ತು. ಇದರಿಂದ ವಾಗ್ವಾದ ನಡೆದಿತ್ತು. ವಿಜಯೋತ್ಸವ ಮುಗಿಸಿ ಬೋಳಿಯಾರು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ಧರ್ಮನಗರದ ಹರೀಶ್ ಪೂಜಾರಿ ಮತ್ತು ಅವರ ಭಾವ ನಂದನ್ ಎಂಬವರನ್ನು ತಡೆಹಿಡಿದ ತಂಡ ಚೂರಿಯಿಂದ ಇರಿದು ಪರಾರಿಯಾಗಿತ್ತು.
ಘಟನೆ ಸಂಬಂಧ ಕೊಣಾಜೆ ಠಾಣೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ರೈ ಬೋಳಿಯಾರ್ ತಡರಾತ್ರಿಯೇ ಭೇಟಿ ನೀಡಿದ್ದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಠಾಣೆಯಲ್ಲಿ ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೋಳಿಯಾರು ಮಸೀದಿ ಸಮೀಪ ವಾಗ್ವಾದ ನಡೆದರೂ ಪೊಲೀಸರು ವೀಡಿಯೋ ಮಾತ್ರ ಸೆರೆಹಿಡಿದಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲ. ಸೆರೆಹಿಡಿದ ವೀಡಿಯೋ ನೋಡಿ ತಕ್ಷಣವೇ ಘಟನೆಗೆ ಕಾರಣರಾದವನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರನ್ನು ಸಮಾಧಾನಿಸಿ ವಾಪಸ್ಸು ಕಳುಹಿಸಿದ್ದಾರೆ.