ಕೌಕ್ರಾಡಿ – ಪಟ್ಲಡ್ಕ: ಗಡಿಯಾಡಿ ಆದಿಮೊಗೇರ್ಕಳ, ಸ್ವಾಮಿ ಕೊರಗಜ್ಜ ಪರಿವಾರ ದೈವಗಳ ನೇಮೋತ್ಸವ-ಧಾರ್ಮಿಕ ಸಭೆ

ಶೇರ್ ಮಾಡಿ

ನೇಸರ ಫೆ.17: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ, ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೇಮೋತ್ಸವದ ಅಂಗವಾಗಿ ಫೆ.14 ರಂದು ರಾತ್ರಿ ಧಾರ್ಮಿಕ ಸಭೆ ನಡೆಯಿತು. ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಂದರ ಕೌಕ್ರಾಡಿಯವರು ಧಾರ್ಮಿಕ ಸಭೆ ಉದ್ಘಾಟಿಸಿ ಹಿರಿಯರು ಮಾಡಿದ ನಿಸ್ವಾರ್ಥ ಸೇವಾ ಕಾರ್ಯಗಳ ಪರವಾಗಿ, ದೈವಗಳ ಅನುಗ್ರಹದಿಂದ ಈ ದೈವಗಳ ದೇವಸ್ಥಾನ ಈ ಹಂತಕ್ಕೆ ಬರಲು ಸಾಧ್ಯ ಎಂದು ನುಡಿದರು ಹಾಗೂ ಶುಭಹಾರೈಸಿದರು.

ಮುಖ್ಯ ಅತಿಥಿ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿಯವರು ಮಾತನಾಡಿ, ಇಂದು ದೈವಗಳ ಕಾರ್ಯಕ್ರಮಗಳು ಪ್ರತಿಷ್ಠೆಗಳ ತೋರ್ಪಡಿಕೆಗೆ ನಡೆಯುತ್ತಿದೆ. ಇದರಿಂದ ಸ್ಥಳದ ಕಾರಣಿಕ ಶಕ್ತಿ ಕ್ಷೀಣವಾಗುತ್ತಿದೆ. ಕೊರಗಜ್ಜ,ಮೊಗೇರ್ಕಳ ಅಥವಾ ಯಾವುದೇ ದೈವಗಳು ಹರಕೆ ರೂಪದಲ್ಲಿ ಯಾವುದನ್ನೂ ಬೇಡುವುದಿಲ್ಲ. ಭಕ್ತಿಯಿಂದ ನಂಬಿದಲ್ಲಿ ಭಕ್ತರ ಸಂಕಷ್ಟಗಳನ್ನು ದೈವಗಳು ನಿವಾರಣೆ ಮಾಡುತ್ತವೆ ಎಂದು ಡಾ.ರಘು ಬೆಳ್ಳಿಪ್ಪಾಡಿ ಯವರು ಹೇಳಿದರು. ಇನ್ನೋರ್ವ ಅತಿಥಿ ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲುರವರು ಮಾತನಾಡಿ, ಮೂರು ವರ್ಷದ ಹಿಂದೆ ಕೇವಲ 58 ದಿನದಲ್ಲಿ ಇಲ್ಲಿನ ಕೊರಗಜ್ಜನ ಕ್ಷೇತ್ರ ಜೀರ್ಣೋದ್ಧಾರ ಗೊಂಡಿದೆ. ಇದಕ್ಕೆ ಕೊರಗಜ್ಜ ದೈವದ ಕೃಪೆಯೇ ಕಾರಣವಾಗಿದ್ದು ಕ್ಷೇತ್ರ ಇಂದು ಜಿಲ್ಲೆ, ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿನ ಕ್ಷೇತ್ರದ ಭಕ್ತರೂ ಅಪಾರ ಸಂಖ್ಯೆಯಲ್ಲಿರುವುದು ಕ್ಷೇತ್ರದ ಕಾರಣಿಕ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತುರವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯ ಇರಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ದೈವ, ದೇವಸ್ಥಾನಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು. ಇದರಿಂದ ಹಿಂದೂ ಧರ್ಮವೂ ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾಗಿ ರೂಪುಗೊಳ್ಳಲಿದೆ ಎಂದರು. ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ,ಸಕಲೇಶಪುರದಲ್ಲಿ ಪಿಡಿಒ ಆಗಿರುವ ತೇಜಸ್ವಿನಿಯವರು,ನೆಲ್ಯಾಡಿ ಐಐಸಿಟಿ ಕಂಪ್ಯೂಟರ್‌ನ ಪ್ರಶಾಂತ್ ಸಿ.ಹೆಚ್, ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸುಗ್ಗಿ ನೇಜಿ ಸಂಭ್ರಮ- 2021 :ವೀಕ್ಷಿಸಿ, Subscribers ಮಾಡಿ

ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆಯವರು ಮಾತನಾಡಿ, ಈ ಕೊರಗಜ್ಜ ಕ್ಷೇತ್ರವನ್ನು 3 ವರ್ಷದ ಹಿಂದೆ ಇಲ್ಲಿನ ಭಕ್ತರ ಅಪೇಕ್ಷೆಯಂತೆ ಅವಿರತ ಶ್ರಮದಿಂದ 58 ದಿನಗಳಲ್ಲಿಯೇ ಜೀರ್ಣೋದ್ದಾರಗೊಂಡಿದ್ದು, ಪ್ರತಿ ಸಂಕ್ರಮಣದಂದು ಅಗೇಲು ಸೇವೆ ನಡೆಯುತ್ತಿದೆ. ಮುಂದೆ ಇಲ್ಲಿ ಅಡುಗೆ ಕಟ್ಟಡ, ಇಂಟರ್‌ಲಾಕ್, ಶೀಟ್ ಅಳವಡಿಕೆಗೆ ಸಂಬಂಧಿಸಿ ಸಚಿವರಿಗೆ ಮನವಿ ಮಾಡಲಾಗಿದ್ದು ಅನುದಾನ ಮಂಜೂರುಗೊಳಿಸುವ ಭರವಸೆ ಸಿಕ್ಕಿದೆ ಎಂದರು. ನನ್ನ ಮನೆಯಲ್ಲಿ ಎರಡು ವರ್ಷದ ಹಿಂದೆ ನಡೆದ ದರೋಡೆ ಪ್ರಕರಣದ ಆರೋಪಿಗಳ ಸುಳಿವು ಸಿಗದೇ ಇದ್ದ ಸಂದರ್ಭದಲ್ಲಿ ಹಲವು ಊಹಾಪೋಹಗಳು ಕೇಳಿಬಂದು ನನ್ನ ತೇಜೋವಧೆ ಮಾಡುವ ಕೃತ್ಯವೂ ನಡೆದಿತ್ತು.ಈ ಹಿನ್ನೆಲೆಯಲ್ಲಿ ಇಲ್ಲಿನ ನೇಮೋತ್ಸವದ ಸಂದರ್ಭದಲ್ಲಿ ಕೊರಗಜ್ಜನ ಮುಂದೆ ಇಲ್ಲಿಯ ಭಕ್ತಾದಿಗಳು ಪ್ರಾರ್ಥನೆ ಮಾಡಿದರು.ಕೊರಗಜ್ಜನ ಅಭಯದಂತೆ 3 ತಿಂಗಳಿನೊಳಗೆ ಆರೋಪಿಗಳ ಬಂಧನವಾಗಿದೆ. ಇದು ಕೊರಗಜ್ಜನ ಶಕ್ತಿಯಾಗಿದೆ ಎಂದು ತುಕ್ರಪ್ಪ ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋಪಾಲಕೃಷ್ಣ ಗೌಡ ಬಾರೆಗುಡ್ಡೆ, ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಹರೀಶ್ ಪಿ.,ಪಟ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸತೀಶ್ ಹಾಗೂ ಗೀತಾ ಪಟ್ಲಡ್ಕ ದಂಪತಿ ಪುತ್ರ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ವಿದ್ಯಾರ್ಥಿ ಇನ್‌ಸ್ಪ್ರೈರ್ ಅವಾರ್ಡ್ ಪ್ರಶಸ್ತಿ ಪಡೆದುಕೊಂಡಿರುವ ಪವನ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸ್ವಯಂ ಸೇವಕರಾಗಿ ದುಡಿದ ಕಾರ್ಯಕರ್ತರನ್ನು ಶಾಲು ಹಾಕಿ ಗೌರವಿಸಲಾಯಿತು.ಲತಾ ಹಾಗೂ ತಂಡದವರು ಪ್ರಾರ್ಥಿಸಿದರು.ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮಹೇಶ್ ಪಿ.ಪಟ್ಲಡ್ಕ ಸ್ವಾಗತಿಸಿದರು.ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ನ ಮಹಿಳಾ ಸಮಿತಿ ಕಾರ್ಯದರ್ಶಿ ದೀಕ್ಷಾ ಸಾಲಿಯಾನ್ ವಂದಿಸಿದರು.ಸುಧೀರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಅನ್ನಸಂತರ್ಪಣೆ, ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಗಳ, ತನ್ನಿ ಮಾಣಿಗ ದೈವದ ಗರಡಿ ಇಳಿಯುವುದು, ಫೆ.15 ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಹರಕೆಯ ಅಗೇಲು ಸೇವೆ ನಡೆಯಿತು.

—ಜಾಹೀರಾತು—

Leave a Reply

error: Content is protected !!