ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ದೈವಸ್ಥಾನದ ಕಾರ್ಯದರ್ಶಿ ಚಂದಪ್ಪ ಗೌಡ ನಿಧನ

ಶೇರ್ ಮಾಡಿ

ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ, ಕೊಣಾಲು ಗ್ರಾಮದ ಕಾಯರ್ತಡ್ಕ ನಿವಾಸಿ ಚಂದಪ್ಪ ಗೌಡ(60)ಅವರು ಜು.೨೯ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೃಷಿಕರಾಗಿದ್ದ ಚಂದಪ್ಪ ಗೌಡ ಅವರು ಕಳೆದ ಕೆಲ ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಎರಡು ದಿನದ ಹಿಂದೆ ಅವರಿಗೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಜು.೨೯ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇವರು ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರದ ಮನೆಯ ಯಜಮಾನರಾಗಿದ್ದು ಕಡೆಂಬಿಲತ್ತಾಯ ಗುಡ್ಡೆಯಲ್ಲಿ ನಡೆಯುವ ವಾರ್ಷಿಕ ನೇಮೋತ್ಸವಕ್ಕೆ ಇಲ್ಲಿಂದ ದೈವದ ಭಂಡಾರ ತರಲಾಗುತ್ತಿತ್ತು.

ಮೃತರು ಪತ್ನಿ ಕುಸುಮಾವತಿ, ಪುತ್ರಿಯರಾದ ವಿದ್ಯಾ, ವಿನುತ, ಪುತ್ರ ವಿಶ್ವಾಸ್, ಸಹೋದರ ಶೇಖರ ಗೌಡ, ಮೂವರು ಸಹೋದರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಮನೆಗೆ ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಪ್ರಮುಖರಾದ ಮುತ್ತಪ್ಪ ಗೌಡ ಎಣ್ಣೆತ್ತೋಡಿ, ತಾರನಾಥ ಗೌಡ ಎಣ್ಣೆತ್ತೋಡಿ, ಪ್ರಭಾನಂದ ಗೌಡ ಹೊಸಮನೆ, ನೋಣಯ್ಯ ಗೌಡ ಡೆಬ್ಬೇಲಿ, ಸುಂದರ ಗೌಡ ಸುರಕ್ಷಾ ನಿಲಯ ಆರ್ಲ ಸಹಿತ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

error: Content is protected !!