ಸೆ.24ರಿಂದ ಅರ್ಧವಾರ್ಷಿಕ ಪರೀಕ್ಷೆ ಎಸ್ಎಸ್ಎಲ್ಸಿ ಅರ್ಧ ವಾರ್ಷಿಕ ಪರೀಕ್ಷೆಗಳು (ಸಂಕಲನಾತ್ಮಕ ಮೌಲ್ಯಮಾಪನ–1) ಸೆ.24ರಿಂದ ಅ.1ರವರೆಗೆ ನಡೆಯಲಿವೆ.
ಇದೇ ಮೊದಲ ಬಾರಿ ಎಲ್ಲ ಪ್ರೌಢಶಾಲೆಗಳಲ್ಲೂ ಏಕರೂಪದ ಪರೀಕ್ಷೆ ನಡೆಸಲಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುತ್ತದೆ. ಪರೀಕ್ಷಾ ಸಮಯಕ್ಕೆ ಸರಿಯಾಗಿ ಎಲ್ಲ ಶಾಲೆಗಳಿಗೂ ತಲುಪಲಿವೆ.
ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳು ಅ.1ರಂದು ಮಧ್ಯಾಹ್ನ 2ರಿಂದ ಆಯಾ ಶಾಲೆಗಳಲ್ಲಿ ನಡೆಸಲು ಮಂಡಳಿ ಸೂಚಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಮಯದಲ್ಲಿ 15 ನಿಮಿಷ ಕಡಿತ ಮಾಡಲಾಗಿದೆ.
ಹೊಸ ನಿಯಮ ಅನುಷ್ಠಾನದ ಬಗ್ಗೆ ಮಂಡಳಿ ಸುತ್ತೋಲೆ ಹೊರಡಿಸಿದೆ. ಈ ಮೊದಲು ಮೂರು ಗಂಟೆಗಳ ಕಾಲ ನಡೆಯುತ್ತಿದ್ದ ಲಿಖಿತ ಪರೀಕ್ಷೆ ಇನ್ನು ಮುಂದೆ 2 ಗಂಟೆ 45 ನಿಮಿಷಗಳ ಕಾಲ ನಡೆಯಲಿದೆ.
ಇದೇ ಶೈಕ್ಷಣಿಕ ವರ್ಷದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಹಿಂದೆ ಲಿಖಿತ ಪರೀಕ್ಷೆಗೆ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ಉತ್ತರಿಸಲು ಪರೀಕ್ಷೆಯಲ್ಲಿ 3 ಗಂಟೆ ಕಾಲಾವಕಾಶ ನೀಡಲಾಗುತ್ತಿತ್ತು. ಈಗ ಗರಿಷ್ಠ 70/80 ಅಂಕಗಳ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು 2.45 ಗಂಟೆಯಲ್ಲಿ ಉತ್ತರ ಬರೆಯಬೇಕಾಗಿದೆ.
ಆದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಯಲ್ಲಿ ಮೂರು ಗಂಟೆ ಕಳೆಯಬೇಕಿದೆ. ಯಾಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಬಳಿಕ ಉತ್ತರಿಸಲು 2 ಗಂಟೆ 45 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
ಎನ್.ಎಸ್.ಕ್ಯು.ಎಫ್ ಹಾಗೂ ಹಿಂದೂಸ್ತಾನಿ ಸಂಗೀತ ವಿಷಯಗಳಲ್ಲಿ 60/40 ಅಂಕಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾದ ಅವಧಿಯನ್ನು ಈ ಹಿಂದಿನಂತೆ 2 ಗಂಟೆ 30 ನಿಮಿಷವನ್ನು ಮುಂದುವರಿಸಲಾಗಿದೆ.