ನೆಲ್ಯಾಡಿ: ವಾರದ ಹಿಂದೆ ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಿರಾಡಿ ನಿವಾಸಿಯೊಬ್ಬರು ಅ.28ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಿರಾಡಿ ಗ್ರಾಮದ ಅಡ್ಡಹೊಳೆ ನಿವಾಸಿ ರಾಜೇಶ್(43ವ.)ಮೃತಪಟ್ಟವರಾಗಿದ್ದಾರೆ.
ರಾಜೇಶ್ ಅವರು ಬೆಂಗಳೂರಿನಲ್ಲಿ ಖಾಸಗಿ ಬಸ್ಸೊಂದರಲ್ಲಿ ಚಾಲಕನಾಗಿದ್ದು ಅ.21ರಂದು ರಾತ್ರಿ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ರೂಮ್‌ಗೆ ಹೋಗುತ್ತಿದ್ದವರು ದಾರಿಮಧ್ಯೆ ಹೆಬ್ಬಾಳ ಭದ್ರಾಲೇಔಟ್ ಸಮೀಪ ಸ್ಕೂಟರ್ ನಿಲ್ಲಿಸಿ ಪಕ್ಕದ ಹೋಟೆಲ್‌ಗೆ ಊಟಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಇನ್ನೋವಾ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ರಾಜೇಶ್ ಅವರಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿ ಬಳಿಕ ಅ.23ರಂದು ಆಂಬುಲೆನ್ಸ್ ಮೂಲಕ ಕರೆತಂದು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ಅ.28ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ರಾಜೇಶ್ ಅವರಿಗೆ ಡಿಕ್ಕಿಯಾಗಿ ಪರಾರಿಯಾಗಿದ್ದ ಇನ್ನೋವಾ ಕಾರನ್ನು ಸಿಸಿಟಿವಿ ಪರಿಶೀಲನೆ ನಡೆಸಿದ ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜೇಶ್ ಅವರು ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಬೆಂಗಳೂರಿನಲ್ಲಿ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಅವರು ನಾಲ್ಕು ವರ್ಷ ಸೌದಿ ಅರೇಬಿಯಾದಲ್ಲೂ ಕೆಲಸ ನಿರ್ವಹಿಸಿದ್ದರು. ಮೃತ ರಾಜೇಶ್ ಅವರು ತಂದೆ ಮಣಿ, ತಾಯಿ ಸಾರಮ್ಮ, ಪತ್ನಿ ವಲ್ಸಮ್ಮ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅ.29ರಂದು ಅಡ್ಡಹೊಳೆ ಮಲಂಕರ ಕೆಥೋಲಿಕ್ ಚರ್ಚ್‌ನಲ್ಲಿ ನಡೆಯಲಿದೆ.