ಬೆಳ್ತಂಗಡಿ: ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್(ರಿ) ಸೌತಡ್ಕಕ್ಕೂ ಶ್ರೀ ಮಹಾಗಣಪತಿ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ, ಇದೊಂದು ಸೇವಾ ಸಂಸ್ಥೆಯಾಗಿದ್ದು, ನಾವು ಯಾವುದೇ ರೀತಿಯಲ್ಲಿ ಜಾಗವನ್ನು ಕಾನೂನು ಬಾಹಿರವಾಗಿ ಪಡೆದಿಲ್ಲ, ಜಾಗ ಖರೀದಿಗೆ ದೇವಸ್ಥಾನದ ಹುಂಡಿಯಿಂದ ಯಾವುದೇ ಹಣವನ್ನು ಪಡೆದಿಲ್ಲ, ಈ ಬಗ್ಗೆ ದಾಖಲೆಗಳಿಲ್ಲ, ಟ್ರಸ್ಟ್ ಡೀಡ್ಗೆ ಆರೋಪ ಮಾಡಿದವರೆ ಸಾಕ್ಷಿ ಸಹಿ ಹಾಕಿದ್ದಾರೆ. ದೇವಸ್ಥಾನದ ಗಂಟೆ ಹಗರಣದಲ್ಲಿ ಕಾರ್ಯನಿರ್ವಹಣಾಧಿಕಾರಿಯವರನ್ನು ಬಲಿಪಶು ಮಾಡಿದ್ದಾರೆ. ಮತ್ತೊಮ್ಮೆ ಅಧ್ಯಕ್ಷನಾಗಲು ಕೆಲವು ಮುಗ್ದರನ್ನು ಕಟ್ಟಿಕೊಂಡು ಪ್ರತಿಭಟನೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟ್ರಸ್ಟ್ನ ಅಧ್ಯಕ್ಷ ಕೃಷ್ಣ ಭಟ್ ಕೊಕ್ಕಡ ಆರೋಪಿಸಿದರು.
ಅವರು ನ.7ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅವರು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಮೇಲೆ ನ.5 ರಂದು ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಹಾಗೂ ಕಳೆದ ಕೆಲವಾರು ಸಮಯಗಳಿಂದ ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಮಾಡುತ್ತಿರುವ ನಿರಾಧಾರ ಆರೋಪಗಳಿಗೆ ಸ್ಪಷ್ಟಿಕರಣ ನೀಡಿದರು.
ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಇದು 2009ರಲ್ಲಿ ಇಂಡಿಯನ್ ಟ್ರಸ್ಟ್ ಆಕ್ಟ್ ಪ್ರಕಾರ ಸಂವಿಧಾನ ಬದ್ಧವಾಗಿ ನೋಂದಣಿ ಆಗಿರುವ ಸೇವಾ ಸಂಸ್ಥೆ ಆಗಿದ್ದು, ಈ ನೆಲದ ಕಾನೂನನ್ನು ಗೌರವಿಸುವ, ಕಾನೂನು ಸಮ್ಮತ ಕೆಲಸ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲಾ ಸಮಾಜಿಕ ಚಟುವಟಿಕೆಗಳು ಪಾರದರ್ಶಕವಾಗಿವೆ. ನಾವು ಯಾವುದೇ ರೀತಿಯಿಂದಲೂ ಜಾಗವನ್ನು ಕಾನೂನು ಬಾಹಿರವಾಗಿ ಪಡೆದಿಲ್ಲ. ಒಂದು ವೇಳೆ ಆ ಭೂಮಿಯನ್ನು 2004 ರಲ್ಲಿ ಖರೀದಿಸಿ 2009 ರವರೆಗೆ ಈ ಭೂಮಿಯ ಪರಭಾರೆ ಕಾನೂನು ಬಾಹಿರವಾಗಿ ವ್ಯವಹರಿಸಿದ್ದರೆ ಟ್ರಸ್ಟ್ ಜವಾಬ್ದಾರಿ ಅಲ್ಲ. 2009 ರ ಮೊದಲಿನ ಭೂಮಿಯ ಪರಭಾರೆ ನಡೆಸುತ್ತಿದ್ದ ವ್ಯಕ್ತಿಗಳು ನಮ್ಮ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಗೆ ಟ್ರಸ್ಟ್ ಡೀಡ್ ಬರೆದು ಕೊಟ್ಟ ಕಾರಣ ಆ ಭೂಮಿ ಸಂಬಂಧ ಮಾಡಿರುವ ಬ್ಯಾಂಕ್ ಸಾಲ ರೂ.6 ಲಕ್ಷವನ್ನು ಟ್ರಸ್ಟ್ ತೀರಿಸಿದೆ ಎಂದು ತಿಳಿಸಿದರು.
ಘಂಟಾಮಣಿಗಳ ಹರಾಜಿನಲ್ಲಿ ಹಗರಣ:
2017 ರಿಂದ 2020 ರ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಅವಧಿಯಲ್ಲಾದ ಸರಕಾರ, ಧಾರ್ಮಿಕ ದತ್ತಿ ಆಯುಕ್ತರ ಅನುಮತಿ ಇಲ್ಲದೇ ಹಾಗೂ ಧಾರ್ಮಿಕ ಕಾಯಿದೆಯ ಕಲಂಗಳ ಉಲ್ಲಂಘನೆ ಮಾಡಿ ಈ ಹಿಂದೆ ಕ್ಷೇತ್ರದ ಹರಕೆಯ ಘಂಟಾಮಣಿಗಳ(10,523 ಕೆ.ಜಿ) ಹರಾಜು ಪ್ರಕ್ರಿಯೆಯಲ್ಲಿ ನಡೆದ ಹಗರಣದ ಸಂಬಂಧ ಈ ಪ್ರಕರಣವನ್ನು ತನಿಖೆ ನಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳ ಸಹಾಯಕ ಆಯುಕ್ತರಿಗೆ ಸುಳ್ಳು ಮಾಹಿತಿಗಳನ್ನು ಲಿಖಿತವಾಗಿ ನೀಡಿ, ಪ್ರಕರಣದ ತನಿಖೆಯ ಹಾದಿ ತಪ್ಪಿಸಿ, ಎಲ್ಲವನ್ನೂ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಹರೀಶ್ಚಂದ್ರ ಅವರ ಮೇಲೆ ಹೊರಿಸಿ ಬಲಿಪಶು ಮಾಡಿರುತ್ತಾರೆ ಎಂದು ಅಪಾದಿಸಿದರು. ಹಗರಣ ನಡೆಸಿದವರಿಂದ ವಸೂಲಿಗೆ ವರದಿ ಬಂದಿದ್ದು, ಹರೀಶ್ಚಂದ್ರರವರು ನಿಧನರಾಗಿದ್ದರಿಂದ ಅದು ಅಲ್ಲಿಗೆ ಮುಕ್ತಾಯಗೊಂಡಿದೆ ಎಂದು ತಿಳಿಸಿದರು.
ಮತ್ತೊಮ್ಮೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಲು ಹೊಂಚು ಹಾಕುತ್ತಿರುವ ಟ್ರಸ್ಟ್ ಮೇಲೆ ಆರೋಪ ಮಾಡಿರುವ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯರು ಕೆಲವು ಮುಗ್ಧರನ್ನು ಸೇರಿಸಿಕೊಂಡು ಪ್ರತಿಭಟನೆಯ ಹೆಸರಲ್ಲಿ ಹಿಂದೂ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ವೇದಿಕೆಯ ಕೋಶಾಧಿಕಾರಿ, ಸದಸ್ಯ, ವಿಶ್ವನಾಥ ಕೊಲ್ಲಾಜೆಯವರೇ ನಮ್ಮ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ನ ಟ್ರಸ್ಟ್ ಡೀಡ್ಗೆ ಸಹಿ ಮಾಡಿರುತ್ತಾರೆ ಎಂದು ತಿಳಿಸಿದರು.
ಕಳೆಂಜ ಗೋ ಶಾಲೆಗೆ ಹುಲ್ಲು:
2021ರಲ್ಲಿ ಅಂದಿನ ದೇವಳದ ವ್ಯವಸ್ಥಾಪನಾ ಸಮಿತಿಯವರಲ್ಲಿ ಮಾತಾಡಿ ಸುಮಾರು ರೂ 6 ಲಕ್ಷ ವೆಚ್ಚದಲ್ಲಿ ಸೌತಡ್ಕ ಕಾಮಧೇನು ಗೋಶಾಲೆಯ ಗೋವುಗಳ ಮೇವಿಗಾಗಿ ಸುಮಾರು ೨ ಎಕರೆ ಭೂಮಿಯಲ್ಲಿ ಹಸಿರು ಹುಲ್ಲು ನಾಟಿ ಮಾಡಿ ಸೌತಡ್ಕ ಗೋಶಾಲೆಗೆ ಹುಲ್ಲು ಒದಗಿಸುವುದೆಂದು ನಿರ್ಣಯಿಸಿತ್ತು. ಆದರೆ ಹುಲ್ಲು ಕಟಾವಿಗೆ ಬಂದಾಗ ಗೋಶಾಲೆಗೆ ಹುಲ್ಲು ಕಟಾವು ಮಾಡಲು ಸಿಬ್ಬಂದಿ ಕೊರತೆ ಇದೆ. ಮತ್ತು ಇತರರ ಭೂಮಿಯಲ್ಲಿ ಬೆಳೆದ ಹುಲ್ಲು ಕಟಾವು ಮಾಡಲು ನಮ್ಮ ದೇವಳದದಲ್ಲಿ ಸಿಬ್ಬಂದಿಗಳಿಗೆ ವೇತನ ಕೊಡಲು ಬರುವುದಿಲ್ಲಾ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳು ಹೇಳಿದ ಕಾರಣ ಒಮ್ಮೆ ಹುಲ್ಲು ಒಣಗಿ ಹೋಗಿ ಬೆಂಕಿ ಹಿಡಿದಿತ್ತು. ಅಲ್ಲಿ ಬೆಳೆದ ಹುಲ್ಲನ್ನು ಕಳೆಂಜದ ಕಾಮಧೇನು ಗೋಶಾಲೆಯ ಗೋವುಗಳಿಗೆ ಮೇವಿಗಾಗಿ ಉಚಿತವಾಗಿ ಒದಗಿಸಲಾಗುತ್ತಿದೆಯೇ ಹೊರತು ಮಾರಾಟ ಮಾಡುತ್ತಿಲ್ಲ, ಟ್ರಸ್ಟ್ ವತಿಯಿಂದ ಆವರಣ, ಕೊಳವೆ ಬಾವಿ, ಪುಂಪು, ಪೈಪ್ಲೈನ್ ಒದಗಿಸಲಾಗಿದೆ ಎಂದು ತಿಳಿಸಿದರು.
ಹುಂಡಿಯ ಹಣದಿಂದ ಜಾಗ ಖರೀದಿಸಿಲ್ಲ:
ದೇವಸ್ಥಾನದ ಹುಂಡಿಯಿಂದ ಹಣ ತೆಗೆದು ಜಾಗ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ದೇವಸ್ಥಾನದ ಹುಂಡಿಯಿಂದ ಹಣ ತೆಗೆದು ಜಮೀನು ಖರೀದಿಸಿರುವ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ. ಮತ್ತು ಈ ಬಗ್ಗೆ ನಮ್ಮ ಟ್ರಸ್ಟ್ ನ ಡೀಡ್ ನಲ್ಲಿ ಯಾವುದೇ ದಾಖಲೆಗಳು ಇರುವುದಿಲ್ಲ. ಸದ್ರಿ ಡೀಡ್ಗೆ ಆರೋಪ ಮಾಡಿದವರೆ ಸಾಕ್ಷಿ ಸಹಿ ಹಾಕಿರುತ್ತಾರೆ. ಮತ್ತು ಅದೇ ಡೀಡ್ ಪ್ರಕಾರವೇ ಟ್ರಸ್ಟ್ ತನ್ನ ಚಟುವಟಿಕೆ ನಡೆಸುತ್ತಿದೆ. ಮುಜರಾಯಿ ಇಲಾಖೆಯ ಹುಂಡಿಯಿಂದ ಅನುಮತಿ ಇಲ್ಲದೇ ಹಣ ತೆಗೆದು ಭೂಮಿ ಖರೀದಿ ಮಾಡಲು ಸಾಧ್ಯವೇ, ಇದಕ್ಕೆ ಕಾನೂನು, ನಿಯಮಗಳಿಲ್ಲವೇ ಎಂದು ಪ್ರಶ್ನಿಸಿದರು.
ಯಾರಿಂದಲೂ ದೇಣಿಗೆ ಸಂಗ್ರಹಿಸಿಲ್ಲ:
ಟ್ರಸ್ಟ್ನ ಜಮೀನಿನಲ್ಲಿ ಇರುವ ವಾಣಿಜ್ಯ ಮಳಿಗೆಗಳ ನಿರ್ಮಾಣ, ವಸತಿ ನಿಲಯಗಳ ನಿರ್ಮಾಣಕ್ಕೆ ಭಕ್ತಾದಿಗಳಿಂದ, ದಾನಿಗಳಿಂದ ಅಥವಾ ದೇವಳದ ನಿಧಿಯಿಂದ ಹಣ ಸಂಗ್ರಹ ಮಾಡಿಲ್ಲ, ಈ ಬಗ್ಗೆ ಯಾವುದೇ ರಶೀದಿ ದಾಖಲೆ ಪತ್ರಗಳು ಇರುವುದಿಲ್ಲ. 2010ನೇ ಸಾಲಿನಲ್ಲಿ ಜಿಪಿಎ ಮೂಲಕ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 6 ಲಕ್ಷ ಅಡಮಾನ ಸಾಲ ಮಾಡಿದ್ದು, ಈ ಸಾಲವನ್ನು ಟ್ರಸ್ಟ್ ನ ಆದಾಯದಿಂದಲೇ ಮರು ಪಾವತಿ ಮಾಡಲಾಗಿದೆ, ಜಾಗದಲ್ಲಿ ಹಣ್ಣುಕಾಯಿ ಅಂಗಡಿ, ವಸತಿ ಗೃಹ ನಿರ್ಮಾಣ ಮಾಡಲಾಗಿದೆ. ಇದರ ಲಾಭದಲ್ಲಿ ಲೋನ್ ಪಾವತಿ ಹಾಗೂ ಇತರ ಸೇವಾ ಚಟುವಟಿಕೆ ಮಾಡುತ್ತಿದ್ದೇವೆ. ಇದೇ ಜಾಗದಲ್ಲಿ ಸೇವಾಭಾರತಿಯವರ ಸಂಸ್ಥೆಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ದೇಶ:
ಟ್ರಸ್ಟ್ಗೆ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕೆಂಬ ಮಹತ್ವವಾದ ಉದ್ದೇಶ ಇತ್ತು. ಟ್ರಸ್ಟ್ಗೆ ಅಷ್ಟು ಹಣ ಹಾಕಲು ಸಾಧ್ಯವಿಲ್ಲದಿರುವುದರಿಂದ ರಾಘವ ಕೊಲ್ಲಾಜೆಯವರ ಹೆಸರಿನ 1 ಎಕ್ರೆ ಜಾಗವನ್ನು ದಾನಪತ್ರ ಮೂಲಕ ವಿವೇಕಾನಂದ ಸೇವಾ ಟ್ರಸ್ಟ್ಗೆ ನೀಡಿದ್ದರು. ಈಗ ಗೊಂದಲ ಉಂಟಾಗಿರುವುದರಿಂದ ಆ ಸಂಸ್ಥೆಯವರು ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ವಿರೋಧ ಮಾಡಿದ್ದಾರೆ ಎಂದು ಹೇಳಿ ಜಾಗವನ್ನು ವಾಪಾಸು ಮಾಡಿದ್ದಾರೆ ಎಂದು ಸ್ವಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಕೃಷ್ಣ ಭಟ್ ಕೊಕ್ಕಡ, ಟ್ರಸ್ಟ್ನ ಸದಸ್ಯರಾದ ಕುಶಾಲಪ್ಪ ಗೌಡ ಪೂವಾಜೆ, ಕಾನೂನು ಸಲಹೆಗಾರ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಪುರಂದರ ಗೌಡ ಕಡೀರ, ಧರ್ಣಪ್ಪ ಕೊಂಪಕೋಡಿ, ಬಾಲಕೃಷ್ಣ ನೈಮಿಷ, ಪ್ರಶಾಂತ ದೇರಾಜೆ ಹಾಗೂ ಕಳೆಂಜ ಕಾಮಧೇನು ಗೋಶಾಲೆಯ ಸಂಚಾಲಕ ಡಾ. ಎಂ.ಎಂ.ದಯಾಕರ್, ಸೇವಾ ಭಾರತಿಯ ಸಂಚಾಲಕ ವಿನಾಯಕ ರಾವ್, ಶ್ರೀಕೃಷ್ಣ ಉಪಸ್ಥಿತರಿದ್ದರು.