ನೆಲ್ಯಾಡಿ ವಿವಿ ಕಾಲೇಜು ಲಲಿತ ಕಲಾ ಸಂಘದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜು ಇಲ್ಲಿನ 2024-25 ನೇ ಸಾಲಿನ ಲಲಿತ ಕಲಾ ಸಂಘದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆಯನ್ನು ಶನಿವಾರದಂದು ಆಯೋಜಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕುಮಾರಿ ನವ್ಯಶ್ರೀ.ಎಂ. ಸ್ವರ್ಗ ಲಲಿತ ಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾದಂತಹ ಶಾಲಾ,ಕಾಲೇಜಿನ ಜೀವನದ ಸಂಗತಿಗಳು ಹಾಗೂ ಬಾಲ್ಯ ಜೀವನದ ಪ್ರಮುಖ ಅಂಶಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ಬೆಳೆಯುವ ಪ್ರತಿಭೆಗಳನ್ನು ಗುರುತಿಸುವ ಶೈಕ್ಷಣಿಕ, ಸಾಮಾಜಿಕ ಪರಿಸರದ ಮುಂದೆ ಪ್ರತಿಭಾ ಕೌಶಲ್ಯಗಳನ್ನು ಬಿಚ್ಚಿಡುವ ಮೂಲಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಡಾ.ಸೀತಾರಾಮ.ಪಿ. ಅವರು ಮಾತನಾಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿಕೊಳ್ಳುವ ಮೂಲಕ ಸಾಕಷ್ಟು ಹೊಸ ಹವ್ಯಾಸಗಳಿಗೆ ಎಡೆ ಮಾಡಿಕೊಡುವ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಹಂಚಿಕೊಂಡರು.

ಲಲಿತ ಕಲಾಸಂಘದ ಸಂಚಾಲಕರಾದ ಚಂದ್ರಕಲಾ.ಬಿ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ಭವ್ಯಶ್ರೀ ನಿರ್ವಹಿಸಿದರು, ಸಹ ಕಾರ್ಯದರ್ಶಿ ಕು.ನುಸ್ರಿಲ್ ಅಝೀಜ್ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆಗಳನ್ನು ನಡೆಸಲಾಯಿತು. ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆಯಲ್ಲಿ ಏಕವ್ಯಕ್ತಿ ಗಾಯನ, ಏಕವ್ಯಕ್ತಿ ನೃತ್ಯ ,ದೇಶಭಕ್ತಿ ಗೀತೆ, ಜನಪದ ಗೀತೆ ,ಸಮೂಹ ನೃತ್ಯ, ಮೂಕಾಭಿನಯ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭಾ ಕೌಶಲ್ಯಗಳನ್ನು ವ್ಯಕ್ತಪಡಿಸಿದರು. ಕು.ಭವ್ಯಶ್ರೀ ಹಾಗೂ ಕು. ನುಸ್ರಿಲ್ ಅಝೀಜ್ ಸ್ಪರ್ಧೆಗಳನ್ನು ನಿರ್ವಹಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಉಪನ್ಯಾಸಕ, ಉಪನ್ಯಾಸಕಿಯರು ಸಹಕರಿಸಿದರು.

Leave a Reply

error: Content is protected !!