ನೆಲ್ಯಾಡಿ: ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ಇಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪೂರ್ವ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ‘ ಹೂಮಳೆ ಮಕ್ಕಳ ಸಂಭ್ರಮ 2024-25 ‘ ಡಿ.19ರಂದು ನಡೆಯಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಮಾತನಾಡಿ, ಪ್ರಾಥಮಿಕ ವಿದ್ಯಾಭ್ಯಾಸವು ಮಕ್ಕಳ ಮುಂದಿನ ಭವಿಷ್ಯಕ್ಕೆ ಅಡಿಪಾಯವಾಗಿದೆ. ಈ ನಿಟ್ಟಿನಲ್ಲಿ ಸರಕಾರವೂ ಮಕ್ಕಳಿಗೆ ಮೊಟ್ಟೆ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ವಿವಿಧ ಸವಲತ್ತು ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಹೇಳಿದರು. ಮೊಬೈಲ್ ಮಕ್ಕಳಿಗೆ ಶತ್ರುವಾಗಿ ಕಾಡುತ್ತಿದೆ. ಒಮ್ಮೆ ಮಕ್ಕಳು ಮೊಬೈಲ್‌ಗೆ ಎಡಿಟ್ ಆದಲ್ಲಿ ಮತ್ತೆ ಬಿಡಿಸಲು ಕಷ್ಟವಿದೆ. ಕಲಿಕೆಯಲ್ಲೂ ಮಕ್ಕಳು ಹಿಂದೆ ಉಳಿಯುತ್ತಾರೆ ಎಂದು ಹೇಳಿದ ಲೋಕೇಶ್ ಎಸ್.ಆರ್.,ಅವರು ಯಾವ ಕ್ಷೇತ್ರದಲ್ಲಿ ಮಕ್ಕಳಿಗೆ ಕಲಿಕೆಗೆ ಆಸಕ್ತಿ ಇದೆಯೋ ಅದಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ ಅವರಲ್ಲಿ ಜ್ಞಾನಾರ್ಜನೆ ದಾಹ ಹೆಚ್ಚಿಸಬೇಕು. ಮನೆಯಲ್ಲಿ ಮಿನಿ ಗ್ರಂಥಾಲಯ ಸೃಷ್ಟಿಸಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಮಾತನಾಡಿ, ಶಾಲೆ ಎಲ್ಲಾ ಧರ್ಮದವರು ಆರಾಧನಾ ಕೇಂದ್ರ, ಪ್ರತಿಭೆ ಎಲ್ಲರಲ್ಲೂ ಇದೆ. ಆದರೂ ಆಧುನಿಕ ಯುಗದಲ್ಲಿ ಸ್ಪರ್ಧೆ ಮುಖ್ಯವಾಗಿದೆ. ಪೋಷಕರು ಹಾಗೂ ಶಿಕ್ಷಕರು ಸಮನ್ವಯತೆಯಿಂದ ಸಾಗಿದಲ್ಲಿ ಮಕ್ಕಳ ಬೆಳವಣಿಗೆ ಆಗಲಿದೆ ಎಂದರು. ಅತಿಥಿಯಾಗಿದ್ದ ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಉಷಾ ಜೋಯಿ ಮಾತನಾಡಿ, ಶಿಕ್ಷಣದಿಂದ ಜೀವನದಲ್ಲಿ ಬದಲಾವಣೆಯಾಗಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ. ಹಿರಿಯರನ್ನು, ಗುರುಗಳನ್ನು ವಿದ್ಯಾರ್ಥಿಗಳು ಗೌರವಿಸಬೇಕೆಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೆಲ್ಯಾಡಿಯ ಉದ್ಯಮಿ ಮೊಹಮ್ಮದ್ ಹನೀಫ್ ಅವರು, ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ದೇವರ ಮೇಲೆ ವಿಶ್ವಾಸ, ತಂದೆ,ತಾಯಿ,ಗುರುಗಳ ಮೇಲೆ ಗೌರವ ಇದ್ದಲ್ಲಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ಹಿಂದೆ ವಿದ್ಯಾಭ್ಯಾಸ ಜ್ಞಾನಾರ್ಜನೆಗೆ ಎಂದು ಇತ್ತು. ಈಗ ಉದ್ಯೋಗಕ್ಕೆ ಎಂದಾಗಿದೆ. ಜಾತಿ, ಸಂಘಟನೆಗೊಂದು ಶಿಕ್ಷಣ ಸಂಸ್ಥೆಗಳಿವೆ. ಆದರೆ ಸರಕಾರಿ ಶಾಲೆಗಳಲ್ಲಿ ಎಲ್ಲರೂ ಒಟ್ಟಾಗಿ ಬರೆಯುವುದನ್ನು ಕಾಣಬಹುದು ಎಂದರು.
ಇನ್ನೋರ್ವ ಸನ್ಮಾನಿತರಾದ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಪದ್ಮನಾಭ ಪುಚ್ಚೇರಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸಬೇಕು. ವಿದ್ಯೆಯ ಜೊತೆಗೆ ಮನೆಯಲ್ಲಿ ಸಂಸ್ಕಾರ ಸಿಗಬೇಕು. ಪ್ರಕೃತಿಯನ್ನು ಪ್ರೀತಿಸಲು ಮಕ್ಕಳಿಗೆ ಕಲಿಸಬೇಕು. ವಿದ್ಯೆ ಮನ ಅರಳಿಸಬೇಕು. ಮನಕಲಕುವಂತೆ ಆಗಬಾರದು ಎಂದರು.
ಸನ್ಮಾನಿತರಾದ ಉದನೆ ಬಿಷಪ್ ಪೋಳಿಕಾರ್ಪಸ್ ಶಾಲೆಯ ಶಿಕ್ಷಣ ಸಂಯೋಜಕರಾದ ರೆ.ಫಾ.ಜಿಜನ್ ಕೆ.ಅಬ್ರಹಾಂ ಅವರು ಮಾತನಾಡಿ, ಕೇವಲ ಅಕ್ಷರಾಭ್ಯಾಸ ಕಲಿಯುವುದು ಮಾತ್ರ ಶಿಕ್ಷಣವಲ್ಲ. ಹಿಂದೆ ಶಿಕ್ಷಣದ ಜೊತೆಗೆ ಶಿಕ್ಷೆ ಇತ್ತು. ಆದರೂ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಪ್ರೀತಿ ಇತ್ತು. ಕಾಲ ಬದಲಾದಂತೆ ಶಿಕ್ಷಣದ ವ್ಯವಸ್ಥೆಯೂ ಬದಲಾವಣೆಯಾಗುತ್ತಿದೆ. ಒಟ್ಟಿನಲ್ಲಿ ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ ಸಿಗಬೇಕು ಎಂದರು.
ಹಿರಿಯ ಶಿಕ್ಷಕಿ ಜಯಂತಿ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ದಿನಕರ ಕೆ.ಎಚ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಿತಿ ಅಧ್ಯಕ್ಷ ಶಿವಣ್ಣ ಪಿ.ಹೆಗ್ಡೆ ಸ್ವಾಗತಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ನಸೀಮಾ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನೆಲ್ಯಾಡಿ ಗ್ರಾ.ಪಂ.ಸದಸ್ಯರೂ ಆದ ಜಯಾನಂದ ಬಂಟ್ರಿಯಾಲ್, ಶಾಲಾ ವಿದ್ಯಾರ್ಥಿ ನಾಯಕ ಮಾ| ಪುನೀತ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಮುಖ್ಯಶಿಕ್ಷಕಿ ವೀಣಾ ಮಸ್ಕರೇನ್ಹಸ್ ವಂದಿಸಿದರು. ಸಹಶಿಕ್ಷಕ ವಿಮಲ್‌ಕುಮಾರ್ ನಿರೂಪಿಸಿದರು.
ಸನ್ಮಾನ:
ಸಾಧಕ ಪೂರ್ವ ವಿದ್ಯಾರ್ಥಿಗಳಾದ ನೆಲ್ಯಾಡಿಯ ಉದ್ಯಮಿ ಮೊಹಮ್ಮದ್ ಹನೀಫ್, ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಪದ್ಮನಾಭ ಪಿ.ಹಾಗೂ ಉದನೆ ಬಿಷಫ್ ಪೋಳಿಕಾರ್ಪಸ್ ಶಾಲೆಯ ಶಿಕ್ಷಣ ಸಂಯೋಜಕ ರೆ.ಫಾ.ಜಿಜನ್ ಕೆ.ಅಬ್ರಹಾಂ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪೂರ್ವ ವಿದ್ಯಾರ್ಥಿ ಚಂದ್ರಶೇಖರ ಬಾಣಜಾಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಎಸ್‌ಡಿಎಂಸಿ ಸದಸ್ಯರೂ, ನೆಲ್ಯಾಡಿ ಗ್ರಾ.ಪಂ.ಸದಸ್ಯರೂ ಆದ ಅಬ್ದುಲ್ ಜಬ್ಬಾರ್ ಸನ್ಮಾನ ಪತ್ರ ವಾಚಿಸಿದರು.
ಗೌರವಾರ್ಪಣೆ:
ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಬಿನೋಜ್, ನಿವೃತ್ತ ಬಿಸಿಯೂಟ ಸಿಬ್ಬಂದಿಗಳಾದ ಉಷಾ, ಸುಂದರಿ, ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಜುವಾರಿಯಾ, ಕ್ಲರ್ಕ್ ಆಗಿ ಸೇವೆ ಸಲ್ಲಿಸಿದ್ದ ಪ್ರತಿಭಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಡಿಎಂಸಿ ನಿಕಟಪೂರ್ವ ಉಪಾಧ್ಯಕ್ಷೆ ಸವಿತಾ ಹಾಗೂ ನಿಕಟಪೂರ್ವ ಸದಸ್ಯರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಕಲಿಕೆ, ಸಾಂಸ್ಕೃತಿಕ ಸ್ಪರ್ಧೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 2024-25ನೇ ಸಾಲಿನ ದತ್ತಿನಿಧಿ ಬಹುಮಾನ ವಿತರಣೆ ಮಾಡಲಾಯಿತು. ಶಾಲೆಯ ಶಿಕ್ಷಕಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಎಲ್‌ಕೆಜಿ, ಯುಕೆಜಿಯ ಇಬ್ಬರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬ್ಯಾಗ್ ವಿತರಿಸಲಾಯಿತು. ಪಿಎಂಶ್ರೀ ಶಾಲಾ ಗುರುತಿನ ಚೀಟಿಯನ್ನು ಇಬ್ಬರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಿಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ದಿನಕರ ಕೆ.ಹೆಚ್.ಧ್ವಜಾರೋಹಣ ನೆರವೇರಿಸಿದರು. ಬಳಿಕ ಎಲ್‌ಕೆಜಿ, ಯುಕೆಜಿ ಹಾಗೂ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ ಕಲರವ ‘ ನಡೆಯಿತು. ಮಧ್ಯಾಹ್ನದ ಬಳಿಕ ಸಂಜೆ ತನಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಹೂಮಳೆ ‘ ಮಕ್ಕಳ ಸಂಭ್ರಮ ನಡೆಯಿತು.