ಕಡಬ : ಮಕ್ಕಳು ಪ್ರತಿಯೊಂದರಲ್ಲೂ ಸಂತೋಷವನ್ನು ಹರಡುತ್ತಾರೆ. ಅಂತಹ ವಿದ್ಯಾರ್ಥಿ ಜೀವನವು ಬಹಳ ಸುಂದರವಾದ ನೆನಪುಗಳು. ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವ ಶಿಕ್ಷಣವನ್ನು ಶಿಕ್ಷಕರು ಮತ್ತು ಪೋಷಕರು ಒದಗಿಸಬೇಕು ಎಂದು ಬೆಥಣಿ ಪಿ ಯು ಕಾಲೇಜ್ ಮ್ಯಾನೇಜರ್ ವಂದನೀಯ ವಿಜೋಯ್ ವರ್ಗಿಸ್ ಹೇಳಿದರು.
ಸೈಂಟ್ ಆನ್ಸ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ವಂದನೀಯ ಪ್ರಕಾಶ್ ಪೌಲ್ ಡಿಸೋಜ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಕಲಿಕೆಯ ಜೊತೆಗೆ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ನಮ್ಮ ಸಂಸ್ಥೆಯು ಜವಾಬ್ದಾರಿಯನ್ನು ನಿಭಾಯಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಜಾನ್ವಿ ದೀಪಾ, ಅನೀನಾ, ಲಿತ್ವಿಕ್, ಝಯಾನ್, ಹೃತಿಕ್, ಇಶಾನಿ, ತ್ರಿಷಾನ್ ಮತ್ತು ಝಿಯಾ ಸುಲ್ತಾನ ವಾರ್ಷಿಕ ವರದಿ ವಾಚಿಸಿದರು. ಸಾಂಸ್ತ್ರತಿಕ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೇಸಿಂತಾ ವೇಗಸ್, ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷ ಗಿರಿಧರ್ ರೈ, ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕಿರಣ್ ಕುಮಾರ್, ಸೈಂಟ್ ಜೋಕಿಮ್ಸ್ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಿ. ಹಿಲ್ದಾ ರೋಡ್ರಿಗಸ್, ಸೈಂಟ್ ಆನ್ಸ್ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ದಕ್ಷಾ ಉಪಸ್ಥಿತರಿದ್ದರು.
ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲ ವಂ. ಅಮಿತ್ ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿ, ಮೀನಾಕ್ಷಿ ವಂದಿಸಿದರು. ಕಾರ್ಯಕ್ರಮವನ್ನು ಸಾರಾ ಎಲ್ ಡಿಸೋಜ ನಿರೂಪಿಸಿದರು.
ಮಕ್ಕಳಿಂದ ಮನೋರಂಜನ ಕಾರ್ಯಕ್ರಮ ನಡೆಯಿತು.