ನೆಲ್ಯಾಡಿ ವಿ.ವಿ.ಕಾಲೇಜು ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ

ಶೇರ್ ಮಾಡಿ

ಕೊಕ್ಕಡ: ನೆಲ್ಯಾಡಿ ವಿ.ವಿ. ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಸರಕಾರಿ ಪ್ರಾಥಮಿಕ ಶಾಲೆ ಶಿಬಾಜೆಯಲ್ಲಿ ಆಯೋಜಿಸಲಾಗಿದ್ದು ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಬುಧವಾರ ನೆರವೇರಿತು.

ಶಿಬಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರತ್ನ ಅವರು ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಾಕೋಸ್ ಅವರು ಮಾತನಾಡಿ ಸಾಮಾಜಿಕ ಸೇವೆಯ ಮೂಲಕ ವಿಶ್ವಾತ್ಮಕವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅವಕಾಶ ಸಿಗುವುದು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂಲಕ ಸಾಧ್ಯ. ಹಿರಿಯರಲ್ಲಿ ಗೌರವ, ಸೇವೆಯಲ್ಲಿ ನಿಷ್ಠೆ, ಶ್ರಮದಲ್ಲಿ ಬದ್ಧತೆಯನ್ನು ಅಳವಡಿಸಿಕೊಳ್ಳುವ ವ್ಯಕ್ತಿತ್ವ ನಿರ್ಮಾಣದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತಹ ಉತ್ಸಾಹವು ಶಿಬಿರದುದ್ದಕ್ಕೂ ಕಾಪಿಟ್ಟುಕೊಂಡು ಘನತೆಯುಕ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಉಜಿರೆ ಎಸ್.ಡಿ.ಎಂ ಕಾಲೇಜುನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹಾಗೂ ಎನ್.ಎಸ್.ಎಸ್ ರಾಜ್ಯಪ್ರಶಸ್ತಿ ವಿಜೇತರಾದ ಡಾ.ಲಕ್ಷ್ಮಿನಾರಾಯಣ.ಕೆ.ಎಸ್ ಅವರು ಶಿಬಿರದ ಮಹತ್ವ ಕುರಿತು ಮಾತನಾಡುತ್ತಾ ಯುವ ಜನತೆಯು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಎನ್.ಎಸ್.ಎಸ್ ಯಾವ ರೀತಿಯಲ್ಲಿ ತರಬೇತಿ ನೀಡುತ್ತದೆ ಎಂಬುದನ್ನು ತಿಳಿಸಿದರು. ಒಬ್ಬ ಸಾಮಾನ್ಯ ವಿದ್ಯಾರ್ಥಿಯು ಎನ್.ಎಸ್.ಎಸ್ ಸ್ವಯಂಸೇವಕನಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ಸರ್ವಾಂಗೀಣ ವಿಕಾಸ ಹೊಂದುವ ಮೂಲಕ ಪರರ ಕಷ್ಟದಲ್ಲಿ ಪಾಲ್ಗೊಳ್ಳುವ ಮನೋಭಾವವನ್ನು ರೂಪಿಸಿಕೊಳ್ಳಲು ಈ ಶಿಬಿರ ಮಹತ್ವದ ಪಾತ್ರ ವಹಿಸುತ್ತದೆ. ವಿನಮ್ರತೆ ಮತ್ತು ಸತತ ಪ್ರಯತ್ನಗಳ ಮೂಲಕ ಎನ್.ಎಸ್.ಎಸ್ ಸ್ವಯಂ ಸೇವಕ ವಿದ್ಯಾರ್ಥಿಯು ಒಬ್ಬ ನಾಯಕನಾಗಿ ಬದಲಾಗುವ ಪ್ರಕ್ರಿಯೆಯು ಇಲ್ಲಿ ನಡೆಯುತ್ತದೆ. ಹಾಗಾಗಿ ಈ ಶಿಬಿರದುದ್ದಕ್ಕೂ ಕ್ರಿಯಾಶೀಲರಾಗಿ ಪಾಲ್ಗೊಂಡು ನೆನಪಿನ ಜೋಳಿಗೆ ಮತ್ತು ಅನುಭವದ ಜೋಳಿಗೆ ಎರಡನ್ನೂ ತುಂಬಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.

ಎನ್.ಎಸ್.ಎಸ್ ರಾಜ್ಯಪ್ರಶಸ್ತಿ ವಿಜೇತ ಐಐಸಿಟಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಸಿ.ಎಚ್, ಶಿಬಾಜೆ ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ರಿತೇಶ್ ಗೌಡ ಬೆಂಗಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಗೌಡ ಅವರು ಶಿಬಿರಕ್ಕೆ ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕ ಭೀಮನಾಯಕ್.ಯು. ಅವರು ಶುಭಸಂಶನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ವಿ.ವಿ. ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರು ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯ ಮನೋಭಾವದಿಂದ ಮಾತ್ರ ಒಬ್ಬ ವಿದ್ಯಾರ್ಥಿ ಸ್ವಯಂಸೇವಕನು ನಾಯಕನಾಗಿ ಬದಲಾಗಲು ಸಾಧ್ಯ. ಈ ಬೆಳವಣಿಗೆಗೆ ‘ಅರಿವೇ ಗುರು’ ಎಂಬ ಮಂತ್ರ ತುಂಬಾ ಮುಖ್ಯ. ಹಾಗಾಗಿ ನಿಮ್ಮನ್ನು ನೀವು ಅರಿಯುವ ಮೂಲಕ ಸಮಾಜವನ್ನು ಅರಿತು ದೇಶ ಕಟ್ಟುವಲ್ಲಿ ಪಾಲ್ಗೊಳ್ಳಿ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರುತಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಸಚಿನ್.ಎನ್.ಟಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಚಂದ್ರಕಲಾ.ಬಿ ಹಾಗೂ ಪಾವನಾ.ರೈ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿಯರು, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂಸೇವಕರು, ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

  •  

Leave a Reply

error: Content is protected !!