

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರದಲ್ಲಿ ಶನಿವಾರದಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ದೀಪ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳ ಭವಿಷ್ಯದ ಯಶಸ್ಸಿಗೆ ಹಾರೈಸುವ ಉದ್ದೇಶದಿಂದ, 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಕಿರಿಯ ಸಹಪಾಠಿಗಳಾದ 9ನೇ ತರಗತಿಯವರಿಗೆ ಶಾಲಾ ಜವಾಬ್ದಾರಿಯ ಸಂಕೇತವಾಗಿ ದೀಪ ಹಸ್ತಾಂತರಿಸಿದರು.

ಶಿವಪ್ರಸಾದ್ ಉಜಿರೆ ಅವರು ತಮ್ಮ ವಿದ್ಯಾರ್ಥಿ ದಿನಗಳ ನೆನಪುಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮುಂದೆ ಹೋಗಲು ಪ್ರೇರೇಪಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ಹರ್ಷವರ್ಧನ್ ಪ್ರೇರಣಾದಾಯಕ ಗೀತೆಯನ್ನು ಹಾಡಿ, ಕಾರ್ಯಕ್ರಮಕ್ಕೆ ಮನಮೋಹಕ ಸ್ಪಂದನ ನೀಡಿದರು.

ಶಾಲಾ ಶಿಕ್ಷಕಿಯಾದ ಸೂರ್ಯ ಮಾತಾಜಿ ವಿದ್ಯಾರ್ಥಿಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಅವರಿಗೆ ಶುಭ ಹಾರೈಸಿದರು. ಮೂಲಚಂದ್ರ ಕಾಂಚನ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಆರತಿಯನ್ನು ಬೆಳಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಿವಪ್ರಸಾದ್ ಉಜಿರೆ (ಸಾಮರಸ್ಯ ಸಂಯೋಜಕರು, ಮಂಗಳೂರು ವಿಭಾಗ), ಖ್ಯಾತ ಮೃದಂಗವಾದಕರಾದ ವಸಂತಕೃಷ್ಣ ಕಾಂಚನ, ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಾಯ ಪುಣಚ ಮತ್ತು ಶಾಲಾ ಮುಖ್ಯ ಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.
ಶಾಲಾ ಪ್ರೌಢ ವಿಭಾಗದ ವಿದ್ಯಾರ್ಥಿಗಳು, ಪೋಷಕರು ಮತ್ತು ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಭಾಗೀರಥಿ ಮಾತಾಜಿ ಸ್ವಾಗತಿಸಿದರು. ಶ್ರೀಮತಿ ಕಾವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ವಂದಿಸಿದರು.





