

ಕಡಬ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಕಡಬ ತಾಲೂಕಿನ ವತಿಯಿಂದ ನೂಜಿಬಾಳ್ತಿಲ ಕಲ್ಲುಗುಡ್ಡೆಯಲ್ಲಿ ಮಾ.08ರಂದು ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಸಮಾರಂಭದಲ್ಲಿ ಕಡಬ ತಾಲೂಕಿನ ಉಪತಹಶೀಲ್ದಾರರಾದ ಗೋಪಾಲ್.ಕೆ ರವರು ವಾತ್ಸಲ್ಯ ಮನೆಯ ನಾಮಫಲಕವನ್ನು ಅನಾವರಣಗೊಳಿಸಿ, ಧರ್ಮಸ್ಥಳದ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದರು. ಅವರು ತಮ್ಮ ಭಾಷಣದಲ್ಲಿ, “ಪೂಜ್ಯ ಧರ್ಮಾಧಿಕಾರಿಗಳ ಸಮಾಜಮುಖಿ ಕಾರ್ಯಗಳಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು” ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣ ಶೆಟ್ಟಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ವಾತ್ಸಲ್ಯ ಮನೆಯ ಫಲಾನುಭವಿಯಾದ ಬಾಬುರವರಿಗೆ ದೇವರ ಪ್ರಸಾದ ನೀಡುವುದರ ಮೂಲಕ ಮನೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಶೆಟ್ಟಿ, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬ ಪಾಠವನ್ನು ಕಲಿಸಿಕೊಡುತ್ತಿದೆ” ಎಂದು ಹೀಗೂ ಹೇಳಿದರು.
ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾತನಾಡಿ, “ಸರಕಾರದಿಂದ ಸಿಗುವ ಸೂರಿನಿಂದ ವಂಚಿತರಾದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ನಿರ್ಮಾಣದ ಮೂಲಕ ಸಹಾಯ ಮಾಡುತ್ತಿದೆ” ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೇನ್ಯ ವಹಿಸಿದ್ದರು. ಯೋಜನಾಧಿಕಾರಿ ವೇದಪ್ಪ ನಾವೂರು ರವರು ಅವರು ಮಾತನಾಡಿ “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಲ್ಲಿ 19192 ಫಲಾನುಭವಿಗಳು ಸೇರಿದ್ದಾರೆ. ಪ್ರತಿ ತಿಂಗಳು 1000 ರಿಂದ 3000 ರೂಪಾಯಿ ಮಾಶಾಸನವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಅಲ್ಲದೆ, ವಾತ್ಸಲ್ಯ ಸದಸ್ಯರಿಗೆ ದಿನಬಳಕೆಗೆ ಬೇಕಾದ ವಾತ್ಸಲ್ಯ ಕಿಟ್ ಗಳನ್ನು ವಿತರಿಸಲಾಗುತ್ತದೆ. ಆಹಾರಕ್ಕಾಗಿ ವಾತ್ಸಲ್ಯ ಮಿಕ್ಸನ್ನು ನೀಡಲಾಗುತ್ತಿದ್ದು, ಇದುವರೆಗೆ 455 ಹೊಸ ಮನೆ ಮತ್ತು 214 ಹಳೆಯ ಮನೆಗಳ ರಿಪೇರಿ, ಶೌಚಾಲಯ-ಸ್ನಾನಗೃಹ ನಿರ್ಮಾಣ ಮಾಡಲಾಗಿದೆ” ಎಂದು ವಿವರಿಸಿದರು. ಈ ಕಾರ್ಯವು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಅವರ ಆಶಯದೊಂದಿಗೆ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ, ಉಪಾಧ್ಯಕ್ಷರಾದ ಚಂದ್ರಶೇಖರ್, ನೂಜೀ ಉಳ್ಳಾಲ್ತಿ ದೇವಸ್ಥಾನದ ಅಧ್ಯಕ್ಷರಾದ ಉಮೇಶ್ ಸಾಯಿರಾಮ್, ಯುವ ಮುಖಂಡರಾದ ಅಭಿಲಾಶ್ ನೂಜಿಬಾಳ್ತಿಲ, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕೆ.ಸವಣೂರು, ಕಡಬ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಕರುಣಾಕರ ಗೋಗಟೆ, ನೂಜಿಬಾಳ್ತಿಲ ಒಕ್ಕೂಟದ ಅಧ್ಯಕ್ಷರಾದ ಸುದೀಶ್ ಅವರು ಉಪಸ್ಥಿತರಿದ್ದು, ಹಸ್ತಾಂತರ ಸಮಾರಂಭಕ್ಕೆ ಶುಭ ಹಾರೈಸಿದರು.
ಮೇಸ್ತ್ರಿ ಪ್ರವೀಣ್ ಕುಮಾರ, ಕಡಬ ವಲಯದ ಶೌರ್ಯ ಘಟಕದ ಸ್ವಯಂಸೇವಕರು, ಸೇವಾಪ್ರತಿನಿಧಿಗಳಾದ ಅಪರ್ಣ, ನಳಿನಿ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಸ್ಥಳೀಯರು ಭಾಗವಹಿಸಿ ಸಹಕಾರ ನೀಡಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನ ವಂದಿಸಿದರು. ಕಡಬ ವಲಯದ ಮೇಲ್ವಿಚಾರಕರಾದ ವಿಜೇಶ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.





