

ತಿರುವನಂತಪುರಂ: ತೂಕ ಹೆಚ್ಚಾಗುವ ಭಯದಲ್ಲಿ ಕಳೆದ 5-6 ತಿಂಗಳಿನಿಂದ ಕೇವಲ ನೀರು ಕುಡಿದು ಡಯಟ್ ಮಾಡುತ್ತಿದ್ದ ಕೇರಳದ ಯುವತಿ ಸಾವಿಗೀಡಾಗಿರುವ ಘಟನೆ ಕಣ್ಣೂರಿನ ಕೂತುಪರಂಬದಲ್ಲಿ ನಡೆದಿದೆ.

ಮೃತ ಯುವತಿಯನ್ನು ಶ್ರೀನಂದ (18) ಎಂದು ಗುರುತಿಸಲಾಗಿದೆ. ‘ಅನೋರೆಕ್ಸಿಯಾ’ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆಕೆ, ತೆಳ್ಳಗಿನ ದೇಹ ಹೊಂದಿದ್ದರೂ ತೂಕ ಹೆಚ್ಚುತ್ತಿದೆ ಎಂಬ ಭ್ರಮೆಗೆ ಒಳಗಾಗಿ ಊಟ ತ್ಯಜಿಸಿದ್ದಳು.

ಅದರ ಪರಿಣಾಮವಾಗಿ, ಕಳೆದ ಕೆಲವು ತಿಂಗಳಿನಿಂದ ಆಕೆ ಏನನ್ನೂ ತಿನ್ನದೆ ಕೇವಲ ಬಿಸಿ ನೀರಿನನ್ನಷ್ಟೇ ಸೇವಿಸುತ್ತಿದ್ದಳು. ಈ ವಿಚಾರವನ್ನು ತನ್ನ ಕುಟುಂಬದವರಿಗೂ ಮುಚ್ಚಿಟ್ಟಿದ್ದ ಶ್ರೀನಂದ, ಕಳೆದ ಐದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರು ಆಹಾರ ಸೇವನೆ ಬಗ್ಗೆ ಸಲಹೆ ನೀಡಿದ್ದರು.
ಆದಾಗ್ಯೂ, ಅವಳ ಆರೋಗ್ಯ ಹದಗೆಡುತ್ತಾ ಹೋಗಿ, ಎರಡು ವಾರಗಳ ಹಿಂದೆ ರಕ್ತದಲ್ಲಿನ ಸಕ್ಕರೆ ಮತ್ತು ಸೋಡಿಯಂ ಪ್ರಮಾಣ ಕಡಿಮೆಯಾಗಿತ್ತು. ಉಸಿರಾಟದ ತೊಂದರೆಯಿಂದ ತಲಶ್ಶೇರಿ ಆಸ್ಪತ್ರೆಯಲ್ಲಿ ಐಸಿಯು ಚಿಕಿತ್ಸೆ ನೀಡಲಾಯಿತಾದರೂ, ಆಕೆಯ ತೂಕ ಕೇವಲ 24 ಕಿಲೋಗ್ರಾಂ ಆಗಿ ವೇಗವಾಗಿ ಕುಸಿದು, ವೆಂಟಿಲೇಟರ್ ಸಹಾಯವಿಲ್ಲದೆ ಬದುಕುಳಿಯಲಾಗಲಿಲ್ಲ.
ತೂಕ ಕಳೆದುಕೊಳ್ಳಲು ಸರಿಯಾದ ಮಾರ್ಗವನ್ನು ಅನುಸರಿಸದೆ ಯೂಟ್ಯೂಬ್ ವಿಡಿಯೋಗಳನ್ನು ಅವಲಂಬಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.





