ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಕಟ್ಟುನಿಟ್ಟಿನ ಕರ್ತವ್ಯನಿರ್ವಹಣಾ ನಿಯಮ: ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ಕಡ್ಡಾಯ ಸೇವೆ

ಶೇರ್ ಮಾಡಿ

ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕೆಲಸ ಮಾಡಬೇಕು. ಬೇರೆಲ್ಲಿಯೂ ಖಾಸಗಿ ಪ್ರಾಕ್ಟೀಸ್ ಮಾಡುವಂತಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ನಡೆದ ವಿಧಾನಪರಿಷತ್ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕಿಶ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮ ಕರ್ತವ್ಯದ ಸಮಯದಲ್ಲಿ ಬೇರೆ ಕಡೆ ಪ್ರಾಕ್ಟೀಸ್ ಮಾಡುತ್ತಿರುವ ಬಗ್ಗೆ ಹಲವಾರು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹಾಜರಾದ ವೈದ್ಯರು ಸಂಜೆ 4 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಇದ್ದೇ ಸೇವೆ ಸಲ್ಲಿಸಬೇಕು ಎಂದು ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ.

ಹಿಂದಿನ ನಿಯಮದ ಪ್ರಕಾರ, ವೈದ್ಯರು 2 ಗಂಟೆಗಳ ಸೇವೆ ನೀಡಿದ ಬಳಿಕ 1 ಗಂಟೆ ಬ್ರೇಕ್ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಗಂಭೀರ ದೂರುಗಳು ಬಂದಿದ್ದರಿಂದ, ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ವೈದ್ಯರು ತಮ್ಮ ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿಯೇ ನಿರಂತರವಾಗಿ ಸೇವೆ ಮಾಡಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ನೂತನ ನಿಯಮದ ಪ್ರಕಾರ, ವೈದ್ಯರು ಪ್ರತಿದಿನ ಹಾಜರಾಗುವಾಗ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ನೀಡಬೇಕು. ಬೆಳಿಗ್ಗೆ 9 ಗಂಟೆ, ಮಧ್ಯಾಹ್ನ 2, 3 ಮತ್ತು 4 ಗಂಟೆಗೆ ಹಾಜರಾತಿ ದಾಖಲಿಸುವುದು ಕಡ್ಡಾಯ. ಈ ಹಾಜರಾತಿ ದಾಖಲೆ ಆಧಾರದ ಮೇಲೇ ವೈದ್ಯರ ಸಂಬಳ ನೀಡಲಾಗುವುದು.

  •  

Leave a Reply

error: Content is protected !!