


ಉಪ್ಪಿನಂಗಡಿ: ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಅವರ ವಿರುದ್ಧ ಮಂಡನೆಯಾದ ಅವಿಶ್ವಾಸ ಗೊತ್ತುವಳಿಗೆ 12 ಮಂದಿ ಸದಸ್ಯರು ಪರವಾಗಿ ಮತ ಚಲಾಯಿಸಿದ್ದು, ಅವರ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವಂತಾಗಿದೆ. ಈ ಸಭೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಮಾ.18 ರಂದು ಇಳಂತಿಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಯಿತು.
ಫೆಬ್ರವರಿ 20 ರಂದು ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತ ಕುಮಾರ್, ವಿಜಯಕುಮಾರ್, ಚಂದ್ರಿಕಾ ಭಟ್, ಉಷಾ ಯು., ಸುಪ್ರೀತ್ ಪಿ., ಸಿದ್ದೀಕ್, ಯು.ಕೆ. ಈಸುಬು, ಕುಸುಮ, ನುಸ್ರುತ್ ಸೇರಿದಂತೆ 9 ಮಂದಿ ಸದಸ್ಯರು ತಿಮ್ಮಪ್ಪ ಗೌಡ ಅವರ ವಿರುದ್ಧ ಪುತ್ತೂರು ಉಪವಿಭಾಗಾಧಿಕಾರಿಗೆ ಅವಿಶ್ವಾಸ ಗೊತ್ತುವಳಿ ಸಲ್ಲಿಸಿದ್ದರು. ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸ್ವಂತ ಇಚ್ಛೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಾ.18 ರಂದು ನಡೆದ ನಿರ್ಣಯ ಸೂಚನಾ ಸಭೆಯಲ್ಲಿ ಈ 9 ಮಂದಿ ಸದಸ್ಯರ ಜೊತೆಗೆ ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಉಷಾ ಎಂ. ಹಾಗೂ ಜಾನಕಿ ಅವರು ಕೂಡ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದರು. ಅಧ್ಯಕ್ಷರ ಪರವಾಗಿ ಕೇವಲ ಸದಸ್ಯ ರಮೇಶ್ ಮಾತ್ರ ಇದ್ದರು. 14 ಸದಸ್ಯ ಬಲದ ಈ ಪಂಚಾಯಿತಿಯಲ್ಲಿ 10 ಮಂದಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದರೆ ಅವಿಶ್ವಾಸ ಜಯ ಸಾಧಿಸುವ ಸನ್ನಿವೇಶದಲ್ಲಿತ್ತು, ಆದರೆ 12 ಮಂದಿ ವಿರೋಧ ವ್ಯಕ್ತಪಡಿಸುವ ಮೂಲಕ ತಿಮ್ಮಪ್ಪ ಗೌಡರು ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ಇಳಂತಿಲ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 11, ಕಾಂಗ್ರೆಸ್ ಬೆಂಬಲಿತ 2 ಮತ್ತು ಎಸ್‌ಡಿಪಿಐ ಬೆಂಬಲಿತ 1 ಸದಸ್ಯರಿದ್ದಾರೆ. ಆದರೆ ಅಧ್ಯಕ್ಷ ತಿಮ್ಮಪ್ಪ ಗೌಡರ ವಿರುದ್ಧವೇ 9 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ತಿರುಗಿಬಿದ್ದಿರುವುದು ಗಮನಾರ್ಹವಾಗಿದೆ.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಸುಮಯ್ಯ, ಕಾರ್ಯದರ್ಶಿ ವಿಜಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.




