ಯಕ್ಷಗಾನ ಮೇರು ಪ್ರತಿಭೆ ಬಿ.ಗೋಪಾಲಕೃಷ್ಣ ಕುರುಪ್ ನಿಧನ: ಕಲಾ ಲೋಕದಲ್ಲಿ ಶೋಕದ ಮೋಡ

ಶೇರ್ ಮಾಡಿ

ನೆಲ್ಯಾಡಿ: ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ, ಹಿಮ್ಮೇಳ ಮತ್ತು ಮುಮ್ಮೆಳದ ವಿಶಿಷ್ಟ ಸಾಧಕರಾಗಿ ಗುರುತಿಸಿಕೊಂಡಿದ್ದ ಬಿ. ಗೋಪಾಲಕೃಷ್ಣ ಕುರುಪ್ (90) ಅವರು ನಿಧನರಾಗಿದ್ದಾರೆ. ಅರಸಿನಮಕ್ಕಿಯ ಬರ್ಗುಳ ನಿವಾಸಿಯಾಗಿದ್ದ ಅವರು, ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದ ಕಲಾವಿದರಾಗಿದ್ದರು.

ಕರ್ನಾಟಕ ಹಾಗೂ ಕೇರಳ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಕುರುಪ್, ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ನಾಟ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಚೆಂಡೆ ವಾದನ ಹಾಗೂ ಮದ್ದಳೆ ವಾದನ ಕ್ರಮದ ಕುರಿತಾಗಿ ಪಠ್ಯ ರಚಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ರಾಜ್ಯ ಗುರುಪೂಜಾ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಲಭಿಸಿದ್ದವು.

ಯಕ್ಷಗಾನ ರಂಗದಲ್ಲಿ ಅಪಾರ ಶಿಷ್ಯಬಳಗ ಮತ್ತು ಅಭಿಮಾನಿಗಳನ್ನು ಹೊಂದಿದ್ದ ಅವರು, ಈ ಕಲೆಗೆ ಮಹತ್ತರ ಕೊಡುಗೆ ನೀಡಿದವರಾಗಿ ಸ್ಮರಿಸಲಾಗುತ್ತಾರೆ. ಅವರ ನಿಧನದಿಂದ ಯಕ್ಷಗಾನ ಲೋಕದಲ್ಲಿ ಶೋಕದ ಛಾಯೆ ಆವರಿಸಿದೆ.

ಮೃತರು ಪತ್ನಿ, ಮಕ್ಕಳು ಸುಬ್ರಮಣ್ಯ ಬಿ., ಅನಿತಾ, ಜಯಂತಿ ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಕೇರಳ ರಾಜ್ಯದ ಪಟ್ಟೆನದ ಪಾಲಕ್ಕುಲಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಹಾಗೂ ಶಿಬಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ದಿನಕರ್ ಕುರುಪ್ ತಿಳಿಸಿದ್ದಾರೆ.

  •  

Leave a Reply

error: Content is protected !!