

ವಿದ್ಯೆ ಎಂದರೆ ಕೇವಲ ಶಾಲೆ-ಕಾಲೇಜುಗಳಲ್ಲಿ ಅಧ್ಯಯನ ಮಾಡಿ ಕೇವಲ ಪದವಿಗಳನ್ನು ಪಡೆದು ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಮಾತ್ರವಲ್ಲ. ನಿಜವಾದ ವಿದ್ಯೆ ಎಂಬುದು ನಮ್ಮ ವ್ಯವಸ್ಥಿತ ಜೀವನದ ಮೌಲ್ಯಗಳು, ಮಾನವೀಯತೆ, ಶಿಸ್ತು, ಸಹಾನುಭೂತಿ ಮತ್ತು ನೈತಿಕ ಜವಾಬ್ದಾರಿಯನ್ನು ಅರಿಯುವ ಪ್ರಕ್ರಿಯೆ ಆಗಿರಬೇಕು.
ನಮ್ಮ ಸಮಾಜದಲ್ಲಿ ಹಲವರು ನೋಡಲು ವಿದ್ಯಾವಂತರಾದರೂ, ಆವರ ಮನೋಭಾವ, ನಡೆ-ನುಡಿಗಳು ಶಿಷ್ಟತೆಯನ್ನು ಪ್ರತಿಬಿಂಬಿಸುವುದಿಲ್ಲ. ದೊಡ್ಡ ಪದವಿಗಳನ್ನು ಪಡೆದವರು ಪರಿಸರ ಹಾಳುಮಾಡುವ ಕಸದ ಹೊಂಡ ರಚಿಸುತ್ತಿದ್ದರೆ, ಸಾಮಾಜಿಕ ಜವಾಬ್ದಾರಿಯನ್ನು ಕಡೆಗಣಿಸುತ್ತಿದ್ದರೆ, ಅವರು ವಿದ್ಯಾವಂತರಾಗಲು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಹಂ, ಅಜ್ಞಾನ, ಸ್ವಾರ್ಥ, ಅಸಹಿಷ್ಣುತೆ ಇವು ವಿದ್ಯೆಯೊಂದಿಗೆ ಬೆಸೆದುಕೊಂಡರೆ, ವಿದ್ಯಾವಂತನೆಂಬ ಹೆಸರಿಗೇ ಕಳಂಕ.
ವಿದ್ಯೆ ಎಂಬುದು ಕೇವಲ ಪುಸ್ತಕಗಳಿಂದ ಸಿಗುತ್ತದೆಯೇ?
ವಿದ್ಯೆ ಎಂಬುದು ಕೇವಲ ಪುಸ್ತಕಗಳಲ್ಲಿ, ಪಾಠಶಾಲೆಗಳಲ್ಲಿ ಅಥವಾ ಕಾಲೇಜುಗಳಲ್ಲಿ ಕಲಿಯುವುದರಿಂದ ಮಾತ್ರ ಬೆಳೆಯುವದಿಲ್ಲ. ನಿಜವಾದ ವಿದ್ಯೆ ಬದುಕಿನ ನೈಜ ಅನುಭವಗಳಿಂದ, ಸಂಸ್ಕಾರಗಳಿಂದ, ಪರರ ಅನುಭವವನ್ನು ಅರಿತುಕೊಳ್ಳುವುದರಿಂದ ಮತ್ತು ಸಮಾಜದ ಒಳ್ಳೆಯ ಕಲ್ಪನೆಗಳನ್ನು ಅಳವಡಿಸಿಕೊಳ್ಳುವುದರಿಂದ ಬೆಳೆಯುತ್ತದೆ.
ಒಂದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ವಿದ್ಯೆ ಎಂದರೆ:
*ನೈತಿಕ ಮೌಲ್ಯಗಳು: ಪರರ ಕ್ಷೇಮವನ್ನು ಅರಿತು, ಸಹಾಯ ಮಾಡುವ ಮನೋಭಾವವನ್ನು ಬೆಳೆಸುವುದು.
*ಶಿಷ್ಟಾಚಾರ ಮತ್ತು ಮೃದು ಸಂಭಾಷಣೆ: ಹಿರಿಯರನ್ನು ಗೌರವಿಸುವುದು, ಸೌಮ್ಯವಾಗಿ ವರ್ತಿಸುವುದು, ಒಬ್ಬರೊಂದಿಗೆ ಒಬ್ಬರು ಪ್ರೀತಿಯಿಂದ ಮಾತನಾಡುವುದು.
*ಪರಿಸರ ಪ್ರೇಮ: ಸ್ವಚ್ಛತೆ ಕಾಪಾಡುವುದು, ಪ್ರಕೃತಿಯನ್ನು ಪ್ರೀತಿಸುವುದು ಮತ್ತು ಪರಿಸರ ಸಂರಕ್ಷಣೆ ಮಾಡುವುದು.
*ಜವಾಬ್ದಾರಿಯುತ ಜೀವನ: ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ನೈತಿಕ ಜೀವನ ಸಾಗಿಸುವುದು.
ನಿಜವಾದ ವಿದ್ಯಾವಂತರ ಗುಣಗಳು
-ಪ್ರಯಾಣದಲ್ಲಿ ಮಗುವನ್ನು ಹಿಡಿದು ನಿಂತ ಮಹಿಳೆಗೆ ಅಥವಾ ಹಿರಿಯರಿಗೆ ಆಸನ ನೀಡುವ ವ್ಯಕ್ತಿ ವಿದ್ಯಾವಂತ.
-ಮನೆಯಲ್ಲಿ ತಾಯಿಯ ಕೆಲಸದಲ್ಲಿ ಸಹಾಯ ಮಾಡುವ ಪುತ್ರಿ ವಿದ್ಯಾವಂತಳು.
-ಪಿತೃ ಸೇವೆ ಮಾಡುತ್ತಿರುವ ಪುತ್ರ ವಿದ್ಯಾವಂತ.
-ಪರಿಸರ ಸಂರಕ್ಷಣೆ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವವರು ನಿಜವಾದ ವಿದ್ಯಾವಂತರಾಗಬಹುದು.
-ಸಹಜ ಕೌಟುಂಬಿಕ ಶಿಸ್ತಿನಿಂದ ಬದುಕುವವರು ವಿದ್ಯಾವಂತರಾಗುತ್ತಾರೆ.
ಇಂದು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾ ಪ್ರಾಪ್ತಿ ಮಾಡುವುದಕ್ಕಿಂತ ಅದರ ಸತ್ಯಾರ್ಥವನ್ನು ಅರಿಯುವುದು ಮುಖ್ಯ. ಶಾಲಾ-ಕಾಲೇಜುಗಳ ಗೋಡೆಗಳಲ್ಲಿ ವಿಳಾಸಹೀನ ಬರಹಗಳನ್ನು ಬರೆಯುವುದು, ಖಾಲಿ ಜಾಗದಲ್ಲಿ ಕಸ ಎಸೆಯುವುದು, ಶಾಲಾ ವಸ್ತುಗಳನ್ನು ಹಾಳುಗೆಡಹುವುದು ಶಿಕ್ಷಣದ ಸರಿಯಾದ ಬಳಕೆಯಲ್ಲ. ನಿಜವಾದ ವಿದ್ಯಾವಂತರಾಗಬೇಕಾದರೆ, ಪ್ರಕೃತಿ, ಜನ, ಸಮಾಜ, ಸಂಸ್ಕೃತಿ ಮತ್ತು ಸುತ್ತಮುತ್ತಲಿನ ಎಲ್ಲವನ್ನೂ ಗೌರವಿಸುವ ಮನೋಭಾವನೆ ಇರಬೇಕು.
ಶಿಕ್ಷಣದ ಮೂಲ ಉದ್ದೇಶವೋ ಸಮಾಜಕ್ಕೆ ಒಳ್ಳೆಯ ಜನರನ್ನು ರೂಪಿಸುವುದು. ಆದರೆ, ಕೆಲವೊಮ್ಮೆ ದೊಡ್ಡ ವಿದ್ಯಾವಂತರಾದವರೇ ಸಮಾಜದ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೀಗಾಗಿ ನಿಜವಾದ ವಿದ್ಯೆ ಎಂದರೆ, ಕೇವಲ ಅಕ್ಷರ ಜ್ಞಾನವಲ್ಲ; ಅದು ಮಾನವೀಯತೆಯ ಮಾರ್ಗವನ್ನು ಅನುಸರಿಸುವ ಜೀವನ ಶಾಸ್ತ್ರ.
ನಾವು ನಿಜವಾದ ವಿದ್ಯಾವಂತರಾಗಬೇಕಾದರೆ, ಜ್ಞಾನವನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು, ಅದನ್ನು ನಮ್ಮ ನಡೆ-ನುಡಿಗಳಲ್ಲಿ, ಹೃದಯದಲ್ಲಿ ಪ್ರತಿಬಿಂಬಿಸಬೇಕು. ಹೀಗಾಗಿ ವಿದ್ಯೆ ನಮ್ಮ ಅಂತರಂಗದ ಬೆಳಕಾಗಬೇಕು, ಆ ಬೆಳಕು ನಮ್ಮ ಇಡೀ ಜೀವನವನ್ನು ಹಸನ್ಮಯಗೊಳಿಸಬೇಕು.
ಬರಹ: ವಿಶ್ವನಾಥ ಶೆಟ್ಟಿ ಕೆ., ಇತಿಹಾಸ ಉಪನ್ಯಾಸಕರು, ಸಂತ ಜಾರ್ಜ್ ಪ.ಪೂ. ಕಾಲೇಜು, ನೆಲ್ಯಾಡಿ






