ಮಳೆಗೆ ತತ್ತರಿಸಿದ ನೆಲ್ಯಾಡಿ ಪೇಟೆ: ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಹರಿದ ಮಳೆಯ ನೀರು-ವಾಹನ ಸವಾರರ ಪರದಾಟ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳು ನದಿಯಾಗಿ ಹರಿದಂತೆ ಕಾಣಿಸಿಕೊಂಡವು. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಈ ಪರಿಸ್ಥಿತಿ ಉಂಟಾಗಿ ವಾಹನ ಸವಾರರು, ಪಾದಚಾರಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ತೀವ್ರ ಪರದಾಟ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿ.ಸಿ.ರೋಡ್ ನಡುವಿನ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತು ಹೋಗಿದ್ದು, ನೆಲ್ಯಾಡಿ ಪೇಟೆಯ ಭಾಗದಲ್ಲಿ ಎತ್ತರದ ರಸ್ತೆ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ನಡೆದಿದ್ದರೂ, ಮಳೆಯ ನೀರು ಹರಿದು ಹೋಗಲು ಯಾವುದೇ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ.

ಅಂಗಡಿಗಳಿಗೆ ನೀರು ನುಗ್ಗಿ ನಷ್ಟ
ಭಾರೀ ಮಳೆಯ ಪರಿಣಾಮವಾಗಿ ರಸ್ತೆಯ ಮೇಲೆ ಹರಿದ ನೀರು ಕೆಲ ಅಂಗಡಿಗಳೊಳಗೆ ನುಗ್ಗಿ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ ಉಂಟುಮಾಡಿದೆ. ಕೆಲವು ಪ್ರದೇಶಗಳಲ್ಲಿ ನೀರು ತಗ್ಗು ಪ್ರದೇಶಗಳಲ್ಲಿ ಕುಳಿತಿದ್ದು, ವಾಹನ ಸವಾರರು ಹಾಗೂ ಜನಸಾಮಾನ್ಯರು ತೀವ್ರವಾಗಿ ಪರದಾಡಿದ್ದಾರೆ.

ಅವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಸ್ಥಳೀಯರ ಆಕ್ರೋಶ
ಸರ್ವಿಸ್ ರಸ್ತೆಗಳ ನಿರ್ಮಾಣದ ವೇಳೆ ಚರಂಡಿಗಳನ್ನು ಎತ್ತರದಲ್ಲಿ ನಿರ್ಮಿಸಿರುವುದರಿಂದ ನೀರಿನ ಸಹಜ ಹರಿವಿಗೆ ಅಡಚಣೆಯಾಗಿದೆ. ಮಳೆ ಬರುವ ಮುನ್ಸೂಚನೆ ಇದ್ದರೂ ಗುತ್ತಿಗೆದಾರರು ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಇರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಡರ್ ಪಾಸ್ ಹೊಂಡಗಳಲ್ಲಿ ನೀರು ನಿಂತು ತೊಂದರೆ
ಪೇಟೆಯ ಎರಡೂ ತುದಿಗಳಲ್ಲಿ ನಿರ್ಮಾಣ ಹಂತದಲ್ಲಿರುವ ಅಂಡರ್ ಪಾಸ್ ಪ್ರದೇಶದಲ್ಲಿ ಹಲವಾರು ಹೊಂಡಗಳು ಇದ್ದು, ಅವುಗಳಲ್ಲಿ ನೀರು ನಿಂತು ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಗಿದೆ.

“ಪ್ರತಿ ಮಳೆಯಲ್ಲೂ ಇದೇ ಸ್ಥಿತಿ” – ಗ್ರಾಮಸ್ಥರ ಅಳಲು
ಚರಂಡಿ ಕಾಮಗಾರಿ ಆರಂಭದ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ನೀರಿನ ಹರಿವಿನ ಕುರಿತು ಮಾಹಿತಿ ನೀಡಲಾಗಿದ್ದರೂ ಸ್ಪಂದನೆ ಇಲ್ಲದೆ ಅವೈಜ್ಞಾನಿಕ ರೀತಿ ಕೆಲಸ ನಡೆಸಿದ ಕಾರಣ ಪ್ರತಿವರ್ಷ ಮಳೆಗಾಲದಲ್ಲಿ ಇದೇ ತೊಂದರೆ ಎದುರಾಗುತ್ತಿದೆ ಎಂದು ವ್ಯಾಪಾರಿಗಳು ಹಾಗೂ ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಸೂಕ್ತ ಕ್ರಮಕ್ಕೆ ಆಗ್ರಹ
ಈ ಕುರಿತಾಗಿ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣ ಸ್ಪಂದಿಸಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಯೋಜನಾಪೂರ್ವಕತೆ ಕೊರತೆಯ ಪರಿಣಾಮವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Nellyady
  •  

Leave a Reply

error: Content is protected !!