

ನೆಲ್ಯಾಡಿ: ಉಜಿರೆ ಎಸ್‌ಡಿಎಂ ಬಿ.ಎಡ್. ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ನಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಲಿಲ್ಲಿ.ಪಿ.ವಿ. ಉದ್ಘಾಟಿಸಿ ಮಾತನಾಡಿದರು. ‘‘ಯಾವುದೇ ವಿದ್ಯಾಸಂಸ್ಥೆಯ ಏಳಿಗೆಯಲ್ಲಿ ವಿದ್ಯಾರ್ಥಿ ಸಂಘದ ಪಾತ್ರ ಬಹುಮುಖ್ಯವಾಗಿದೆ. ಸಂಘವು ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ’’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಪನ್ಯಾಸಕಿ ಅನುಷಾ ಡಿ.ಜೆ. ಮಾತನಾಡಿ, ಸಮಾ ಜದ ಕಲ್ಯಾಣಕ್ಕೆ ನಾಯಕರ ಅಗತ್ಯತೆ ಇದೆ. ನಾಯಕತ್ವ ಭಾವವನ್ನು ಎಲ್ಲಾ ಪ್ರಶಿಕ್ಷಣಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ, ಎಂದರು.

ವಿದ್ಯಾರ್ಥಿ ಸಂಘದ ಸಂಯೋಜಕ ತಿರುಮಲೇಶ್ ರಾವ್ ಎನ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿನ್ಸಿಪಾಲ್ ಸಂತೋಷ್ ಸಲ್ದಾನ, ಉಪನ್ಯಾಸಕರಾದ ವಿದ್ಯಾಶ್ರೀ ಪಿ., ಮಂಜು ಆರ್., ಪ್ರಿಯದರ್ಶಿನಿ ಜಿ. ಭಟ್, ವಿದ್ಯಾರ್ಥಿ ಸಂಘದ ನಾಯಕಿ ವೀಕ್ಷದೀಪ ಆರ್.ಎಸ್., ಕಾರ್ಯದರ್ಶಿ ದೀಕ್ಷಿತ್ ಎಂ., ಆದ್ಯಾ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಸಂತೋಷ್ ಟಿ.ಯು. ಸ್ವಾಗತಿಸಿದರು. ವಿಶ್ಮಿತಾ ಅತಿಥಿಗಳನ್ನು ಪರಿಚಯಿಸಿ, ವಿಶಾಲಾ ವಂದಿಸಿದರು. ಫಾತಿಮಾತ್ ರಾಫಿಯಾ ಕಾರ್ಯಕ್ರಮ ನಿರ್ವಹಿಸಿದರು.









