

ನೆಲ್ಯಾಡಿ: ಹುಟ್ಟಿನಿಂದ ಸಾಯುವವರೆಗೆ ಸೇವೆ ಕೊಡುವ ಕ್ಷೇತ್ರವಿದ್ದರೆ ಅದು ಗ್ರಾಮ ಪಂಚಾಯಿತಿ ಯಾಗಿದೆ. ವ್ಯಕ್ತಿ ಎಷ್ಟು ದೊಡ್ಡವನಾದರೂ ತನಗೆ ಆಗಬೇಕಾದ ಕೆಲಸವನ್ನು ಮಾಡಲು ಗ್ರಾಮ ಪಂಚಾಯಿತಿಗೆ ಬರಲೇಬೇಕಾಗಿದೆ. ಗ್ರಾಮದ ಸರ್ವ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಅತಿ ಮುಖ್ಯವಾಗಿದೆ. ವ್ಯಕ್ತಿಯ ಬಗ್ಗೆ ಚರ್ಚೆ ಮಾಡುವುದು ಮುಖ್ಯವಲ್ಲ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆ ಅತಿ ಮುಖ್ಯವಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಹೇಳಿದರು.

ನೆಲ್ಯಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಆಯೋಗ ಹಾಗೂ ಗ್ರಾಮ ಪಂಚಾಯಿತಿ ಸ್ವಂತ ನಿಧಿಯಿಂದ ನಿರ್ಮಾಣಗೊಂಡ ನೆಲ್ಯಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ‘ಗ್ರಾಮ ಸೌಧ’ ವನ್ನು ಮಂಗಳವಾರ ದಂದು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೇಂದ್ರ ಗ್ರಾಮ ಪಂಚಾಯಿತಿ ಆಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿಯನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿದ್ದಾರೆ. 15ನೇ ಹಣಕಾಸಿನ ಯೋಜನೆಯಿಂದ ನೇರವಾಗಿ ಹಣ ಬರುವಂತೆ ಹಾಗೂ ಗ್ರಾಮದ ಖರ್ಚು ವೆಚ್ಚಗಳನ್ನು ಗ್ರಾಮ ಪಂಚಾಯಿತಿ ನಿರ್ವಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೇಂದ್ರ ಸರಕಾರದಿಂದ ಬರುವಂತ ಎಲ್ಲಾ ಯೋಜನೆಗಳ ಅನುದಾನವು ಅನುಷ್ಠಾನವಾಗುವುದು ರಾಜ್ಯದ ಇಲಾಖೆಗಳ ಮುಖಾಂತರವಾಗಿದೆ. ಜಿಲ್ಲೆಯ ಜನರ ಅಪೇಕ್ಷೆಗೆ ತಕ್ಕಂತೆ ಪ್ರಾಮಾಣಿಕವಾದ ಕೆಲಸವನ್ನು ಮಾಡುತ್ತೇನೆ. ಈ ಗ್ರಾಮ ಪಂಚಾಯಿತಿ ಜನೋಪಯೋಗಿಕಾರಿಯಾಗಿ ಕೆಲಸವನ್ನು ಮಾಡಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಮಾತನಾಡಿ ಕೇಂದ್ರ ಸರಕಾರವು ಗ್ರಾಮ ಪಂಚಾಯಿತಿ ಮುಖಾಂತರ ಪ್ರತಿಯೊಬ್ಬ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ. ಜನಪ್ರತಿನಿಧಿಗಳಾದ ನಾವುಗಳು ಯಾವ ರೀತಿಯಾದ ತಾರತಮ್ಯ ಮಾಡದೆ, ಭ್ರಷ್ಟಾಚಾರ ಮಾಡಿದರೆ ನಮ್ಮ ಸ್ಥಾನಕ್ಕೆ ನ್ಯಾಯ ದೊರೆಯುತ್ತದೆ ಎಂದರು. ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಲಾಂ ಬಿಲಾಲ್ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ. ಹೆಚ್, ಕಡಬ ತಾಲೂಕು ಪಂಚಾಯಿತಿ ಗ್ರಾಮೀಣ ಅಭಿವೃದ್ಧಿ ಸಹಾಯಕ ನಿರ್ದೇಶಕರಾದ ಸಂದೇಶ್ ಕೆ.ಎಸ್, ಕಡಬ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಇಂಜಿನಿಯರ್ ಮನೋಜ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ವಹಣಾಧಿಕಾರಿ ವಿನಯಕುಮಾರಿ, ಕಿರಿಯ ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ನೆಲ್ಯಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ರೇಷ್ಮಾ ಶಶಿ ಉಪಸ್ಥಿತರಿದ್ದರು.
ಸನ್ಮಾನ :
ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಎಂ.ದೇವರಾಜ್, ಮಂಜುಳ.ಎನ್, ಆನಂದ.ಎ, ಕಿರಿಯ ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ಕಡಬ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಇಂಜಿನಿಯರ್ ಮನೋಜ್ ಕುಮಾರ್ , ಕಡಬ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ. ಹೆಚ್, ನೆಲ್ಯಾಡಿ ಗ್ರಾಮ ಪಂಚಾಯಿತಿನ ಸದಸ್ಯರುಗಳಿಗೆ, ಸಿಬ್ಬಂದಿಗಳಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುಳ್ಯ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಪುತ್ತೂರು ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾದ ಭಾಸ್ಕರ್ ಗೌಡ ಇಚ್ಚಿಲಂಪಾಡಿ, ತಾಲೂಕು ಪಂಚಾಯತಿ ಮಾಜಿ ಸದಸ್ಯೆ ತೇಜಸ್ವಿನಿ, ಕೌಕ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉದಯಕುಮಾರ್, ಗೋಳಿತೊಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಸವಿತಾ, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಬ್ರಾಹಿಂ.ಎಂ.ಕೆ, ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಂಗಾಧರ ಶೆಟ್ಟಿ, ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಉದ್ಯಮಿ ಕೆ.ಪಿ.ವರ್ಗೀಸ್, ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎ.ಕೆ.ವರ್ಗೀಸ್, ನೆಲ್ಯಾಡಿ – ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷರಾದ ಸತೀಶ್.ಕೆ.ಎಸ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನೆಲ್ಯಾಡಿ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್.ಜಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ.ಟಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ರವಿಪ್ರಸಾದ್ ಶೆಟ್ಟಿ ವಂದಿಸಿದರು. ಪಂಚಾಯಿತಿನ ಸದಸ್ಯರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಪ್ರತಿಕ್ರಿಯೆಗೆ ಸಂಸದರ ನಕಾರ:
ನೆಲ್ಯಾಡಿ-ಕೌಕ್ರಾಡಿ ಹೋರಾಟ ಸಮಿತಿಯವರೊಂದಿಗಿನ ಸಭೆಯ ಬಳಿಕ ಸಂಸದರು ನೆಲ್ಯಾಡಿ ಗ್ರಾ.ಪಂ.ನ ಗ್ರಾಮ ಸೌಧ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದು ಈ ವೇಳೆ ಮಾಣಿ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ, ಪೆರಿಯಶಾಂತಿ-ಸುಬ್ರಹ್ಮಣ್ಯ-ಪೈಚಾರು ಲಿಂಕ್ ರಸ್ತೆ ನಿರ್ಮಾಣದ ವಿಚಾರ ಪ್ರಸ್ತಾಪಿಸಿದರೂ ನೆಲ್ಯಾಡಿ ಪೇಟೆಯಲ್ಲಿ ಅಂಡರ್‌ಪಾಸ್ ನಿರ್ಮಾಣದ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ನೆಲ್ಯಾಡಿಯ ವರ್ತಕರಲ್ಲಿ ಬೇಸರ ತಂದಿದೆ. ಸಂಸದರು ಸಭೆಯಿಂದ ನಿರ್ಗಮನದ ವೇಳೆ ನೆಲ್ಯಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣದ ಕುರಿತು ಪತ್ರಕರ್ತರು ಪ್ರಶ್ನಿಸಿದರೂ ಪ್ರತಿಕ್ರಿಯೆ ನೀಡಲು ಸಂಸದರು ನಿರಾಕರಿಸಿ ತೆರಳಿದರು.










