ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭರವಸೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್ ನಿರ್ಮಿಸಿ ಕೊಡುವುದಾಗಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಹೇಳಿದರು.

ನೆಲ್ಯಾಡಿ ಪೇಟೆಯಲ್ಲಿ ಎರಡು ಬದಿ ಸರ್ವೀಸ್ ರಸ್ತೆಯ ಪಕ್ಕ ತಡೆಗೋಡೆ ನಿರ್ಮಿಸಿ ಎತ್ತರಿಸಿದ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ನೆಲ್ಯಾಡಿ ಪೇಟೆ ಇಬ್ಭಾಗವಾಗಲಿದೆ. ಇದರಿಂದ ವರ್ತಕರಿಗೆ, ಸಾರ್ವಜನಿಕರಿಗೆ ತೀರಾ ತೊಂದರೆಯಾಗಲಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಕಲ್ಲಡ್ಕ ಮಾದರಿಯಲ್ಲಿಯೇ ಮೇಲ್ಸೇತುವೆ ಹೆದ್ದಾರಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ 1 ವರ್ಷದ ಹಿಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದರಿಂದ ಪೇಟೆಯಲ್ಲಿ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕಾಗಿ ಸಂಸದರ ಸಹಿತ ರಾಜ್ಯ, ಕೇಂದ್ರ ಸರಕಾರಗಳಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಎ.15ರಂದು ನೆಲ್ಯಾಡಿಗೆ ಆಗಮಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರೊಂದಿಗೆ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯವರು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಚರ್ಚೆ ನಡೆಸಿ ನೆಲ್ಯಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನೆಲ್ಯಾಡಿ ಪೇಟೆಯಲ್ಲಿ ಈಗಾಗಲೇ ಎರಡು ಅಂಡರ್‌ಪಾಸ್ ಮಾಡಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯೂ ಅರ್ಧದಷ್ಟು ಮುಗಿದಿದೆ. ಪೇಟೆಯಲ್ಲಿ ಹೆಚ್ಚುವರಿಯಾಗಿ ಮತ್ತೆ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಂಸದರು ಹೋರಾಟ ಸಮಿತಿಯವರಿಗೆ ಭರವಸೆ ನೀಡಿ, ಶೀಘ್ರದಲ್ಲೇ ಕಾಮಗಾರಿ ನಡೆಸುವುದಾಗಿಯೂ ಹೇಳಿದರು.

ಅಂಗಡಿ-ಮುಂಗಟ್ಟು ಬಂದ್:
ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕೆ ಒತ್ತಾಯಿಸಿ ನೆಲ್ಯಾಡಿ ಪೇಟೆಯ ವರ್ತಕರು ಎ.15ರಂದು ಮಧ್ಯಾಹ್ನದ ತನಕ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು.

ಸಭೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಪದಾಧಿಕಾರಿಗಳಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಉಷಾ ಅಂಚನ್, ನಾಝೀಂ ಸಾಹೇಬ್, ಕೆ.ಪಿ.ತೋಮಸ್, ಕೆ.ಎಂ.ಹನೀಫ್, ಗಣೇಶ್ ರಶ್ಮಿ, ರಾಮಣ್ಣ ಟೈಲರ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ, ರವಿ ಸುರಕ್ಷಾ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ. ಮತ್ತಿತರರು ಉಪಸ್ಥಿತರಿದ್ದರು.

ನೆಲ್ಯಾಡಿಗೆ ಆಗಮಿಸಿದ ದ.ಕ.ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಮೇಲ್ಸೇತುವೆಗೆ ಬದಲಾಗಿ, ಹೆಚ್ಚುವರಿಯಾಗಿ ಮೂರು ಅಂಡರ್ ಪಾಸ್‌ಗಳನ್ನು ನಿರ್ಮಿಸಿ ಸಾರ್ವಜನಿಕ ಅನುಕೂಲತೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಎ.ಕೆ.ವರ್ಗೀಸ್
ಅಧ್ಯಕ್ಷರು, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ

  •  

Leave a Reply

error: Content is protected !!