ನೆಲ್ಯಾಡಿ: ಮಕ್ಕಳ ಮೋಜಿನ ಬೇಸಿಗೆ ಶಿಬಿರ ಸಂಪನ್ನ

ಶೇರ್ ಮಾಡಿ

ನೆಲ್ಯಾಡಿ: ಜೆಸಿಐ ನೆಲ್ಯಾಡಿಯ ಆಶ್ರಯದಲ್ಲಿ, ಲಹರಿ ಸಂಗೀತ ಕಲಾ ಕೇಂದ್ರ ನೆಲ್ಯಾಡಿ ಮತ್ತು ವರ್ತಕ ಹಾಗೂ ಕೈಗಾರಿಕಾ ಸಂಘ ನೆಲ್ಯಾಡಿ – ಕೌಕ್ರಾಡಿಯ ಸಹಯೋಗದೊಂದಿಗೆ ಏರ್ಪಡಿಸಲಾದ 7 ದಿನಗಳ “ಮಕ್ಕಳ ಮೋಜಿನ ಬೇಸಿಗೆ ಶಿಬಿರ”ದ ಸಮಾರೋಪ ಸಮಾರಂಭವು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಉತ್ಸಾಹಭರಿತವಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, “ಬೇಸಿಗೆ ಶಿಬಿರವೆಂದರೆ ಕೇವಲ ಆಟ-ಪಾಠವಲ್ಲ, ಅದು ಮಕ್ಕಳಲ್ಲಿ ನಿಲುಕಿರುವ ಸೃಜನಶೀಲತೆಯ ಬೆಳವಣಿಗೆಯೊಂದಕ್ಕೆ ವೇದಿಕೆ. ಸಣ್ಣ ವಯಸ್ಸಿನಲ್ಲಿ ಇಂಥ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಆತ್ಮವಿಶ್ವಾಸ, ನೈಪುಣ್ಯಗಳು ಹಾಗೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಭವಿಷ್ಯದ ವೃತ್ತಿಜೀವನಕ್ಕೆ ಸಹ ಇದು ಪೂರಕವಾಗಬಹುದು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳೊಳಗಿನ ಪ್ರತಿಭೆಗಳಿಗೆ ಈ ವೇದಿಕೆಯಲ್ಲಿ ಚೈತನ್ಯ ದೊರಕಿದಂತಾಗಿದೆ,” ಎಂದು ಹೇಳಿದರು.

ನೆಲ್ಯಾಡಿ- ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, “ಈ ಶಿಬಿರ ಮಕ್ಕಳಿಗೆ ಶಿಕ್ಷಣದ ಹೊರಗಿನ ಜ್ಞಾನವನ್ನು ನೀಡಿದಂತೆ ಆಗಿದೆ. ಇವು ಮಕ್ಕಳ ಚಿಂತನ ಶಕ್ತಿಯನ್ನು ವೃದ್ಧಿಸುತ್ತವೆ ಮತ್ತು ಪೋಷಕರಿಗೆ ಮಕ್ಕಳ ನೈಜ ಆಸಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತವೆ,” ಎಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಮಹಿಳಾ ಜೆಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ ವಹಿಸಿ ಸ್ವಾಗತಿಸಿದರು.

ವೇದಿಕೆಯಲ್ಲಿ ನೆಲ್ಯಾಡಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಏಲಿಯಾಸ್.ಎಂ.ಕೆ, ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರದ ಗುರು ವಿಶ್ವನಾಥ ಶೆಟ್ಟಿ.ಕೆ, ಶಿಬಿರದ ನಿರ್ದೇಶಕಿ ಭಾಗ್ಯಶ್ರೀ, ನೆಲ್ಯಾಡಿ ಜೆಸಿಐ ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ.ಜೆ ಬಂಟ್ರಿಯಾಲ್, ಕಾರ್ಯದರ್ಶಿ ನವ್ಯಶ್ರೀ ಉಪಸ್ಥಿತರಿದ್ದರು.

ಶಿಬಿರದಲ್ಲಿ ವಿವಿಧ ಕಲಾ, ಸಾಂಸ್ಕೃತಿಕ, ಯೋಗ, ಆಟಪಾಠ, ಮತ್ತು ವ್ಯಕ್ತಿತ್ವ ವಿಕಾಸದ ಕಾರ್ಯಾಗಾರಗಳು ನಡೆದಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಶಿಬಿರದ ಯೋಗ ತರಬೇತುದಾರ ನಿವೃತ್ತ ಮುಖ್ಯಶಿಕ್ಷಕ ವೆಂಕಟರಮಣ ಆರ್ ಮತ್ತು ನಿರ್ದೇಶಕಿ ಭಾಗ್ಯಶ್ರೀ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಶಿಬಿರಾರ್ಥಿಗಳು ಮತ್ತು ಅವರ ಪೋಷಕರು ಶಿಬಿರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ಈ ರೀತಿಯ ಶಿಬಿರಗಳು ನಿರಂತರ ನಡೆಯಲಿ ಎಂದು ಆಶಿಸಿದರು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಪೂರ್ವ ಅಧ್ಯಕ್ಷ ಪುರಂದರ ಗೌಡ ಡೆಂಜ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಜ್ಞಾಹ್ನವಿ ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ನವ್ಯಪ್ರಸಾದ್ ವಂದಿಸಿದರು.

  •  

Leave a Reply

error: Content is protected !!