

ವ್ಯಾಟಿಕನ್ ಸಿಟಿ: ಧರ್ಮಗುರು ಪೋಪ್ ಫ್ರಾನ್ಸಿಸ್ ಸೋಮವಾರ (ಏಪ್ರಿಲ್ 21) ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 88 ವರ್ಷದ ಪೋಪ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವ್ಯಾಟಿಕನ್ ಪ್ರಕಟಣೆಯಲ್ಲಿ ತಿಳಿಸಿದೆ.
ಲ್ಯಾಟಿನ್ ಅಮೆರಿಕದಿಂದ ಬಂದ ಮೊದಲ ರೋಮನ್ ಕ್ಯಾಥೋಲಿಕ್ ಚರ್ಚ್ ಧರ್ಮಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಫ್ರಾನ್ಸಿಸ್, ಇತ್ತೀಚೆಗೆ ತಮ್ಮ ಆರೋಗ್ಯದ ಸಮಸ್ಯೆಯಿಂದಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಈ ವರ್ಷವೂ ತಾವು ಸತತ ಮೂರನೇ ಬಾರಿಗೆ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಭಾಗವಹಿಸಿಲ್ಲ.
ಇದಕ್ಕೂ ಮುನ್ನ ಭಾನುವಾರ ಪೋಪ್ ಫ್ರಾನ್ಸಿಸ್ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರೊಂದಿಗೆ ಖಾಸಗಿ ಸಭೆಯಲ್ಲಿ ಭಾಗವಹಿಸಿದ್ದ ವಿಡಿಯೋ ಹೊರಬಿದ್ದಿತ್ತು. ವೈದ್ಯರ ಸೂಚನೆ ಪ್ರಕಾರ ವಿಶ್ರಾಂತಿಯಲ್ಲಿರಬೇಕಾಗಿದ್ದರೂ ಈಸ್ಟರ್ ಭಾನುವಾರದಂದು ಭಕ್ತರಿಗೆ ದರ್ಶನ ನೀಡಿ ಧಾರ್ಮಿಕ ನಿಷ್ಠೆ ಮೆರೆದಿದ್ದರು.











