

ಪುತ್ತೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮಿನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭಯಾನಕ ದಾಳಿಯನ್ನು ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪುತ್ತೂರು ಘಟಕದಿಂದ ಇಲ್ಲಿನ ನೆಹರೂ ನಗರದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರವಾಸಿಗರ ಮೇಲಿನ ಈ ಹೇಡಿತನದ ದಾಳಿಯನ್ನು ಎಬಿವಿಪಿ ತೀವ್ರವಾಗಿ ಖಂಡಿಸಿ, ಕೇಂದ್ರ ಸರ್ಕಾರವು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು. ಭಾರತೀಯ ನಾಗರಿಕರೆಲ್ಲರೂ ಒಗ್ಗಟ್ಟಾಗಿ ಇಂತಹ ಭಯೋತ್ಪಾದಕ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡಬೇಕೆಂದು ಪರಿಷತ್ ಕರೆ ನೀಡಿದೆ.
ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರ ಸರ್ಕಾರದ ಪ್ರಯತ್ನಗಳಮಧ್ಯೆಯೂ, ಉಗ್ರಗಾಮಿ ನುಸುಳುಕೋರರ ಹಾವಳಿ ಮುಂದುವರಿಯುತ್ತಿರುವುದು ಕಳವಳಕಾರಿ ಎನ್ನಲಾಗಿದೆ. ಇತ್ತೀಚಿನ ವಲಸೆ ಕಾರ್ಮಿಕರು, ಮಾರುಕಟ್ಟೆಗಳಲ್ಲಿನ ನಾಗರಿಕರು ಹಾಗೂ ಪ್ರವಾಸಿಗರ ಮೇಲಿನ ದಾಳಿಗಳು ಇದಕ್ಕೆ ಸಾಕ್ಷಿಯಾಗಿದೆ.
ಎಬಿವಿಪಿ ಘಟಕದ ಸದಸ್ಯರು “ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಹೋರಾಟ ನಡೆಯಬೇಕಾಗಿದೆ” ಎಂಬ ಘೋಷಣೆಗಳನ್ನು ಕೂಗಿ, ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದರು ಹಾಗೂ ಗಾಯಾಳುಗಳಿಗೆ ಶೀಘ್ರ ಚೇತರಿಕೆ ಹಾರೈಸಿದರು.














