

ಕುಂದಾಪುರ: ‘ಬಿಗ್ ಬಾಸ್’ ಖ್ಯಾತಿಯ ಚೈತ್ರ ಕುಂದಾಪುರ ಅವರು ಮೇ 9ರಂದು ಬಹುಕಾಲದ ಗೆಳೆಯ ಶ್ರೀಕಾಂತ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದರ ಬೆನ್ನಲ್ಲೇ ಆಕೆಯ ತಂದೆ ಬಾಲಕೃಷ್ಣ ನಾಯ್ಕ್ ಅವರು ಸಿಡಿದು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ಈ ಮದುವೆಯನ್ನು ನಾನು ಒಪ್ಪಲಾರೆ. ಮದುವೆಗೆ ನನಗೆ ಆಹ್ವಾನವೂ ಕೊಡಲಾಗಿಲ್ಲ. ನನ್ನ ಮಗಳಾಗಿದ್ದರೂ, ಮದುವೆಗೆ ಕರೆಯಲಾಗಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ ಬಾಲಕೃಷ್ಣ ನಾಯ್ಕ್, ತಮ್ಮ ಮಗಳು ಚೈತ್ರಾ ಮತ್ತು ಆಕೆಯ ಪತಿಯನ್ನು ‘ಕಳ್ಳರು’ ಎಂದು ಕರೆದಿದ್ದಾರೆ.
ಅವರು ಮತ್ತಷ್ಟು ತೀವ್ರವಾಗಿ ಪ್ರತಿಕ್ರಿಯಿಸುತ್ತಾ, “ನನ್ನ ಪತ್ನಿಯು ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲರೂ ಹಣದ ಆಸೆಗಾಗಿ ನಾಟಕವಾಡುತ್ತಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಇವರು ಹಣ ಹಂಚಿಕೊಂಡಿದ್ದಾರೆ,” ಎಂದು ಆರೋಪಿಸಿದರು.
ಚೈತ್ರಾ ‘ಸೈನಿಕರಿಗೆ ಹಣ ಕೊಟ್ಟಿದ್ದೇನೆ’ ಎಂದು ಹೇಳಿದ್ದನ್ನು ಉಲ್ಲೇಖಿಸುತ್ತಾ, “ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಹೆಮ್ಮೆ ಪಡುವೆವು. ಆದರೆ ಇದು ಮೋಸದ ಹಣ. ದೇಶಸೇವೆ ಹೇಳಿಕೊಳ್ಳುವವಳು ತಂದೆಗೆ ಅನ್ನ ಹಾಕಲಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನನ್ನ ಮನೆ ನಾನು ಕಟ್ಟಿದ್ದರೂ, ಇಂದು ನಾನು ಅನಾಥನಾಗಿದ್ದೇನೆ. ನನ್ನ ಪತ್ನಿ ಬಿಗ್ ಬಾಸ್ ಮನೆಗೆ ಹೋಗುವಾಗ ಬೀಗ ಹಾಕಿ ಜಗಲಿಯಲ್ಲಿ ಬಿಟ್ಟು ಹೋಗಿದ್ದಳು. ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ನನಗೆ ಹೇಳಿಲ್ಲ. ನಾನು ಸಾಮಾನ್ಯ ಹೋಟೆಲ್ ನೌಕರ,” ಎಂದು ತಮ್ಮ ದುಃಖವನ್ನು ಹೊರಹಾಕಿದರು.
ತಮ್ಮ ದೊಡ್ಡ ಮಗಳು ಗಾಯತ್ರಿ ಮಾತ್ರ ತಮ್ಮ ಜೊತೆ ಮೌಲ್ಯಪೂರ್ಣ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. “ಚೈತ್ರಾ ತನ್ನ ಅಕ್ಕನ ಮೇಲೆ ಸುಳ್ಳು ಅಪವಾದ ಹೊರಿಸಿ, ತನ್ನ ಬದ್ಧತೆ ಕಳೆದುಕೊಂಡಿದ್ದಾಳೆ,” ಎಂದು ಆರೋಪಿಸಿದರು.
ಇಡೀ ವಿವಾದದ ಹಿನ್ನೆಲೆಯಲ್ಲಿ ಚೈತ್ರಾ ಹಾಗೂ ಆಕೆಯ ಕುಟುಂಬದ ವಿರುದ್ಧ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳಲ್ಲಿ ತಮ್ಮ ವಾದವನ್ನು ಬಿಟ್ಟಿದ್ದಾರೆ.













