

ಬೆಳ್ತಂಗಡಿ: ಧರ್ಮಸ್ಥಳದ ಬೊಳಿಯಾರ್ ನಿವಾಸಿ, ಪ್ರಸ್ತುತ ಕಾಶಿಬೆಟ್ಟಿಯಲ್ಲಿ ವಾಸವಾಗಿರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಜೆಡಿಎಸ್ ಮಾಜಿ ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ (22) ಅವರು ಪಂಜಾಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಮೇ 17ರಂದು ನಡೆದಿದೆ.
ಜೆಟ್ ಏರೋಸ್ಪೇಸ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆಕಾಂಕ್ಷಾ, ಪಂಜಾಬ್‌ನ ಎಲ್‌ಪಿಯು ಪಗ್ವಾಡ ಕಾಲೇಜಿನಿಂದ ಜಪಾನ್ ಉದ್ಯೋಗಕ್ಕೆ ಅಗತ್ಯವಿದ್ದ ಪ್ರಮಾಣಪತ್ರ ಪಡೆಯಲು ತೆರಳಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಂದ ಕುಟುಂಬದವರಿಗೆ ಫೋನ್ ಮೂಲಕ ಬಂದಿದ್ದು, ತಂದೆ ಸುರೇಂದ್ರ ಅವರು “ಇದು ನಿಖರವಾಗಿ ಅಪಘಾತವಲ್ಲ, ಕೊಲೆ ಮಾಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಲೇಜಿಗೆ ಮಿತ್ರನೊಬ್ಬನ ಜೊತೆ ಬೈಕಿನಲ್ಲಿ ಹೋಗುತ್ತಿದ್ದೆನೆಂಬುದಾಗಿ ಕೊನೆಯದಾಗಿ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಿದ್ದ ಆಕಾಂಕ್ಷ, ನಂತರ ತಕ್ಷಣವೇ ಕಾಲ್‌ಗೆ ಉತ್ತರಿಸದೆ ನಿಗೂಢವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಪಂಜಾಬ್‌ನ ಜಲಂಧರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದವರು ಕೂಡಲೇ ವಿಮಾನದ ಮೂಲಕ ಪಂಜಾಬ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಆಕಾಂಕ್ಷಾ, ದಂಪತಿಯ ಏಕೈಕ ಮಗಳಾಗಿದ್ದು, ಇವರ ಸಹೋದರನಿಗೆ ಕೆಲ ತಿಂಗಳುಗಳ ಹಿಂದಷ್ಟೇ ವಿವಾಹವನ್ನೂ ನೆರವೇರಿಸಿದ್ದರು. ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.













