

ವಿಟ್ಲ: ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಸಿಕ್ಕಿಹಾಕಿಕೊಳ್ಳುವ ಘಟನೆ ಮಂಗಳವಾರ ವಿಟ್ಲ ಠಾಣಾ ವ್ಯಾಪ್ತಿಯ ಪಾಲ್ತಾಜೆ ಬಳಿ ನಡೆದಿದೆ. ಕಾರು ನಿಯಂತ್ರಣ ತಪ್ಪಿ ಇತರ ಎರಡು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ, ಒಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಂದಿ ಭಾಷಿಕರಾಗಿರುವ ಆರೋಪಿಗಳು ಆಲ್ಟೋ ಕಾರಿನಲ್ಲಿ ಬಂದು ಸಾಲೆತ್ತೂರಿನ ಬಳಿ ಇರುವ ಪೆಟ್ರೋಲ್ ಬಂಕ್ನಲ್ಲಿ ಇಂಧನ ಹಾಕಿಸಿಕೊಂಡು ಹಣ ನೀಡದೇ ಪಾಲ್ತಾಜೆಯ ಮಾರ್ಗವಾಗಿ ಪರಾರಿಯಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರು ರಸ್ತೆ ನಿಯಂತ್ರಣ ತಪ್ಪಿ, ಒಂದು ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಆಕ್ಟಿವಾ ಸವಾರನಾಗಿರುವ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಘಟನಾ ಸ್ಥಳಕ್ಕೆ 112 ವಾಹನದ ಪೊಲೀಸರು ಹಾಗೂ ವಿಟ್ಲ ಠಾಣೆಯ ಪೊಲೀಸರು ಧಾವಿಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರು ಮದ್ಯದ ನಶೆಯಲ್ಲಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ವಿಟ್ಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.













