

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ ಮೇಲೆ ಸೋಮವಾರ ದಂದು ಹಲ್ಲೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಡುಗೆ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್ ಹೊಡೆದಿದ್ದಾನೆ. ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾದರು. ತಕ್ಷಣ ಜಾಗೃತರಾದ ಜೈಲಿನ ಅಧಿಕಾರಿಗಳು ಮುನೀರ್ ಮೇಲೆ ಹಲ್ಲೆ ಮಾಡುವುದನ್ನು ತಪ್ಪಿಸಿದರು. ಸ್ಥಳಕ್ಕೆ ತೆರಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಚೊಟ್ಟೆ ನೌಷಾದ್ ಮೇಲೆ ಹಲ್ಲೆ
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ್ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗಿತ್ತು. ಹೀಗಾಗಿ ಸೋಮವಾರ ದಂದು ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೈಸೂರು ಕಾರಾಗೃಹಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ನೌಷಾದ್, ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದಿದ್ದನು. ಹೀಗಾಗಿ ಜೈಲಿನಲ್ಲಿ ಮತ್ತೋರ್ವ ಕೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಚೊಟ್ಟೆ ನೌಷಾದ್ ಮೇಲೆ ಬಿ ಬ್ಯಾರಕ್‌ನ ಹಲವು ಕೈದಿಗಳು ಇದ್ದಕಿದ್ದಂತೆ ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ಮಾಡಿದ್ದರು.
ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಹಿಂದೆ ನಡೆದುಹೋದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನೆಲೆ, ಜೈಲಿನಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.













