

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಇಲ್ಲಿ ಜು.8ರಂದು ಶಾಲೆಯ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಚಿಣ್ಣರ ಆಟದ ಮನೆ ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಶಾಲಾ ಶತಮಾನೋತ್ಸವ ಸಮಿತಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಕಾರ್ಯಕ್ರಮವನ್ನು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ನಂತರ ಅವರು ಚಿಣ್ಣರ ಆಟದ ಮನೆ ಉದ್ಘಾಟಿಸಿ ಮಾತನಾಡಿ, “ಇಂದಿನ ಮೈಕ್ರೋ ಫ್ಯಾಮಿಲಿಗಳ ಯುಗದಲ್ಲಿ ಮಕ್ಕಳಿಗೆ ಆಟದ ಮೂಲಕ ಬೆಳವಣಿಗೆ ನೀಡುವ ಈ ರೀತಿಯ ಆಟದ ಮನೆಗಳು ಅತ್ಯಂತ ಅಗತ್ಯವಾಗಿವೆ. ಹಿಂದೆ ಒಟ್ಟಾಗಿದ್ದ ಕುಟುಂಬ ವ್ಯವಸ್ಥೆಯಿಂದಾಗಿ ಮಕ್ಕಳಿಗೆ ಒಂಟಿತನವೇ ಇರಲಿಲ್ಲ. ಈ ನಿಟ್ಟಿನಲ್ಲಿ ಈ ಪ್ರಯತ್ನ ಶ್ಲಾಘನೀಯ” ಎಂದು ಹೇಳಿದರು.
ಎಸ್‌ಡಿಎಂ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಸದಾ ಮುಂದಾಗಿದೆ. ಶಾಲೆಯ ಶತಮಾನೋತ್ಸವ ಸಮಿತಿ ತಿಂಗಳಿಗೆ ಒಂದು ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿರುವುದು ಪ್ರಶಂಸನೀಯ, “ಅಂಗ್ಲ ಮಾಧ್ಯಮ ಶಾಲೆಗಳ ಸ್ಪರ್ಧಾತ್ಮಕ ಯುಗದಲ್ಲಿಯೂ ಈ ಶಾಲೆಯು ಉತ್ತಮ ವಿದ್ಯಾರ್ಥಿಗಳ ಭರ್ತಿಯನ್ನು ಹೊಂದಿರುವುದು ಹೆಮ್ಮೆಯ ವಿಷಯ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾದ ಶಾಂತ ಮತ್ತು ಈಶ್ವರ ದೇವಾಡಿಗ ಅವರನ್ನು ಶಾಲಾ ಶತಮಾನೋತ್ಸವ ಸಮಿತಿಯ ಪರವಾಗಿ ಅವರ ನಿವಾಸದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು, ಸೋಮಶೇಖರ್ ವಂದಿಸಿದರು.










