

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಮಂಡೆಗುಂಡಿ, ಬೇರಿಕೆ, ಕಂಚಿನಡ್ಕ, ಪಿಲತ್ತಿಂಜ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ಆನೆಗಳ ಅಟ್ಟಹಾಸ ತೀವ್ರವಾಗಿದ್ದು, ಬೆಳೆದ ಬಾಳೆ, ಅಡಿಕೆ ಹಾಗೂ ತೆಂಗಿನ ತೋಟಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳ್ಳುತ್ತಿವೆ. ಕೃಷಿಕರಲ್ಲಿ ದಿನದಿಂದ ದಿನಕ್ಕೆ ಭೀತಿಯ ವಾತಾವರಣ ಉಂಟಾಗುತ್ತಿದೆ.
ಭಾನುವಾರ ಮಧ್ಯರಾತ್ರಿ ಮಂಡೆಗುಂಡಿಯ ಬಾಲ ಮುರಳಿಕೃಷ್ಣ ಅವರ ತೋಟಕ್ಕೆ ನುಗ್ಗಿದ ಆನೆಗಳು ಬಾಳೆ ಗಿಡಗಳನ್ನು ಜಖಂಗೊಳಿಸಿದ್ದು ಮಾತ್ರವಲ್ಲದೆ, ನೀರಿನ ಪೈಪ್ ಲೈನ್ ಗಳನ್ನೂ ಹಾನಿಗೊಳಿಸಿ ಲಕ್ಷಾಂತರ ರೂ.ಗಳ ಆರ್ಥಿಕ ನಷ್ಟ ಉಂಟುಮಾಡಿವೆ. ಇದೇ ರೀತಿ ನಾರಾಯಣ ಬೇರಿಕೆ, ಮಹೇಶ್ ಭಟ್ ಕಂಚಿನಡ್ಕ, ರಾಮ ಎಡಪಡಿತ್ತಾಯ ಮುಂತಾದವರ ತೋಟಗಳತ್ತ ಆನೆ ದಾಳಿ ಮುಂದುವರೆದಿದೆ.
ಕೃಷಿಕರ ಪ್ರಕಾರ, ಅರಣ್ಯ ಇಲಾಖೆ ನಿರ್ಮಿಸಿದ್ದ ಆನೆ ತಡೆಕಂದಕಗಳು ಹಲವೆಡೆ ಹಾಳಾಗಿರುವುದರಿಂದ ಆನೆಗಳು ತೋಟಗಳಿಗೆ ಸುಲಭವಾಗಿ ನುಗ್ಗುತ್ತಿವೆ. ಈ ಬಗ್ಗೆ ಜು. 8ರಂದು ವರದಿ ಪ್ರಕಟವಾದ ಬೆನ್ನಲ್ಲೇ ಉಪ್ಪಿನಂಗಡಿ ಪ್ರೊಫೆಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಸ್ತ ಶೆಟ್ಟಿಯವರು ತ್ವರಿತ ಸ್ಪಂದನೆ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಹಾನಿಗೀಡಾದ ಕೃಷಿಕರೊಂದಿಗೆ ಮಾತನಾಡಿ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಹಾನಿಯ ಪ್ರಮಾಣ, ತೋಟಗಳಿಗೆ ನುಗ್ಗಿದ ಮಾರ್ಗ ಹಾಗೂ ಕುಸಿದಿರುವ ತಡೆಕಂದಕಗಳ ಸ್ಥಳಗಳನ್ನು ಪರಿಶೀಲಿಸಿ, ಸಂಬಂಧಿತ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರದ ಬಗ್ಗೆ ವಿವರಿಸಿ, ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪ ವಲಯಾರಣ್ಯಾಧಿಕಾರಿ ಭವಾನಿ ಶಂಕರ್, ಗತ್ತು ಅರಣ್ಯ ಪಾಲಕ ದಿವಾಕರ ರೈ, ದಿನದ ಕೂಲಿ ನೌಕರ ದಿನೇಶ್ ಹಾಗೂ ಸ್ಥಳೀಯ ಕೃಷಿಕರು ಉಪಸ್ಥಿತರಿದ್ದರು.










