

ಕಡಬ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ಉಪ್ಪಿನಂಗಡಿ ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. “ಪತ್ರಿಕೆ, ಮಾಧ್ಯಮಗಳು ಸುತ್ತಮುತ್ತಲ ಸಂಭವಗಳನ್ನು ವಿವರಿಸುವ ಮಹತ್ವದ ಕೊಡುಗೆಯಾಗಿವೆ. ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದರ ಜೊತೆಗೆ ಜ್ಞಾನವನ್ನು ವಿಸ್ತರಿಸುವ ಮೂಲಕ ಭವಿಷ್ಯ ರೂಪಿಸುವ ಶಕ್ತಿಯನ್ನೂ ಹೊಂದಿವೆ. ಮೊಬೈಲ್‌ಗಳಲ್ಲಿ ಮಾತ್ರ ತೃಪ್ತಿಯಲ್ಲದೆ ಮುದ್ರಿತ ಪತ್ರಿಕೆಗಳನ್ನು ಓದಲು ಅಭ್ಯಾಸ ಬೆಳೆಸಬೇಕು,” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಗುರುತಿನಿ ನವೀಕರಣ ಚೀಟಿ ವಿತರಿಸಿದರು. “ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿವೆ. ಆದರೆ ಮೊಬೈಲ್ ಬಳಕೆ ಹೆಚ್ಚಿದ ಬಳಿಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಚಟುವಟಿಕೆಗಳು ಕಡಿಮೆಯಾಗಿವೆ. ಇದರಿಂದ ದೂರ ಉಳಿದು, ಶಿಕ್ಷಣ ಮತ್ತು ಪರಿಶ್ರಮದತ್ತ ಗಮನ ಹರಿಸಲು ಯುವಕರು ಅಗತ್ಯವಿದೆ,” ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿ ಹಾಗೂ ತರಬೇತಿ ನೀಡುವುದು ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿದೆ ಎಂದು ಅವರು ವಿವರಿಸಿದರು. ಜೊತೆಗೆ ಪತ್ರಿಕಾ ವಿತರಕರ ಮಹತ್ವದ ಸೇವೆಯನ್ನು ಹೆಚ್ಚು ಗುರುತಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಎನ್.ಕೆ. ವಹಿಸಿದ್ದರು. ನೂಜಿಬಾಳ್ತಿಲ ಬೆಥನಿ ಸಂಸ್ಥೆಯ ನಿರ್ದೇಶಕ ವಂ.ಆ್ಯಂಟನಿ ಒವೈಸಿ, ಪ್ರಾಂಶುಪಾಲ ಜಾರ್ಜ್ ಟಿ.ಎಸ್., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ, ಪ್ರೌಢಶಾಲಾ ಮುಖ್ಯಶಿಕ್ಷಕ ತೋಮಸ್ ಎ.ಕೆ., ಕಾರ್ಯದರ್ಶಿ ವಿಜಯಕುಮಾರ್ ಉಪಸ್ಥಿತರಿದ್ದರು.
ಪ್ರಮುಖರಾದ ಪಿ.ಪಿ. ವರ್ಗೀಸ್, ಅಭಿಲಾಷ್ ಪಿ.ಕೆ., ಕೃಷ್ಣ ಶೆಟ್ಟಿ ಕಡಬ, ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ಸಿದ್ದಿಕ್ ನೀರಾಜೆ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಕೊಯಿಲ ಸ್ವಾಗತಿಸಿ, ತೋಮಸ್ ಎ.ಕೆ. ವಂದಿಸಿದರು. ನಾಗರಾಜ್ ಎನ್.ಕೆ. ನಿರೂಪಣೆ ನಡೆಸಿದರು.
ಸನ್ಮಾನ:
ನೂಜಿಬಾಳ್ತಿಲದ ಹಿರಿಯ ಪತ್ರಿಕಾ ವಿತರಕ ಜಯಕುಮಾರ್ ಜೈನ್ ಕಲ್ಲುಗುಡ್ಡೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅವರ ಪತ್ನಿ ಸುರಭಿ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು.










