ನಿಲ್ಲದ ಆನೆ ದಾಳಿ; ಇಚ್ಲಂಪಾಡಿ ಹಾಗೂ ಬಲ್ಯದಲ್ಲಿ ಭಾರೀ ಕೃಷಿಹಾನಿ

ಶೇರ್ ಮಾಡಿ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದಲ್ಲಿ ಕಳೆದ ಭಾನುವಾರದಂದು ಕೃಷಿಕರ ತೋಟಗಳಲ್ಲಿ ಲಗ್ಗೆ ಇಟ್ಟ ಆನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, ಮಂಗಳವಾರ ರಾತ್ರಿ ಬಲ್ಯ ಸಮೀಪದ ಪಟ್ಟೆ ಸರ್ಕಾರಿ ಶಾಲೆ ಬಳಿಯ ತೋಟವೊಂದರ ಕಾಂಪೌಂಡ್ ಗೋಡೆಯನ್ನೇ ಮುರಿದು, ಬಾಳೆ, ತೆಂಗು ಬೆಳೆಗಳನ್ನು ನಾಶಗೊಳಿಸಿದ ದುರ್ಘಟನೆ ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈ ತೋಟದ ಮಾಲಿಕ ರಾಮಕೃಷ್ಣ ಎಡಪಡಿತ್ತಾಯ ಅವರಂತೆಯೇ ಇನ್ನೂ ಹಲವಾರು ರೈತರು ಕಳೆದ ಕೆಲವು ವಾರಗಳಿಂದ ಬೆಳೆ ಹಾನಿಯಿಂದ ಬಳಲುತ್ತಿದ್ದಾರೆ. ಇದೀಗ ಶಾಲಾ ಪರಿಸರದಲ್ಲಿ ಆನೆಗಳ ಓಡಾಟ ಕಂಡುಬಂದಿರುವುದರಿಂದ ಮಕ್ಕಳಿಗೂ ಭೀತಿ ಬೆಳೆದು, ಶಾಲೆಗೆ ಹೋಗುವ ಧೈರ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಲ್ಕು ಜೀವ ಬಲಿ – ಇನ್ನೂ ಎಚ್ಚರವಾಗದ ಸರ್ಕಾರ?
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಆನೆಗಳ ದಾಳಿ ಗಂಭೀರ ಸ್ಥಿತಿಗೆ ತಲುಪಿದ್ದು, ಈಗಾಗಲೇ ನಾಲ್ಕು ಮಂದಿ ಜೀವಹಾನಿಗೆ ಒಳಗಾಗಿದ್ದಾರೆ. ಆದರೆ ಈ ಹಿನ್ನಲೆಯಲ್ಲಿ ಸರ್ಕಾರದಿಂದ ಶಾಶ್ವತ ಪರಿಹಾರದತ್ತ ಯಾವುದೇ ಗಂಭೀರ ಕ್ರಮಗಳು ಕೈಗೊಳ್ಳಲ್ಪಟ್ಟಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ದಿನನಿತ್ಯ ಸಂಚರಿಸುವವರಿಗೂ ಭೀತಿ
ಪ್ರತಿ ಬೆಳಗ್ಗೆ ತೋಟಕ್ಕೆ ತೆರಳುವ ರೈತರು, ಶಾಲೆಗೆ ಹೋಗುವ ಮಕ್ಕಳು ಹಾಗೂ ಉದ್ಯೋಗಕ್ಕೆ ತೆರಳುವ ಮಹಿಳೆಯರು – ಎಲ್ಲರಿಗೂ ಓಡಾಟವೇ ಜೀವದ ಹಂಗಾಗಿ ಪರಿಣಮಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿರುವ್ದೂ ಇದೇ ಕಾರಣದಿಂದ.

  •  

Leave a Reply

error: Content is protected !!