ಕೊಕ್ಕಡ: ಕಾಡು ಹಂದಿ ದಾಳಿ: ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಪರಿಶೀಲನಾ ಭೇಟಿ

ಶೇರ್ ಮಾಡಿ

ಕೊಕ್ಕಡ: ಅರಸಿನಮಕ್ಕಿ ಸಮೀಪದ ಉಡ್ಯೆರೆ ಪ್ರದೇಶದಲ್ಲಿ ಸಂಭವಿಸಿದ ಕಾಡು ಹಂದಿ ದಾಳಿಯಿಂದ ಗಾಯಗೊಂಡ ಘಟನೆಯ ಮೇಲೆ ಮಂಗಳವಾರದಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರದಂದು ಸಂಜೆ ಸುಮಾರು 4 ಗಂಟೆ ಸಮಯಕ್ಕೆ, ಉಡ್ಯೆರೆ ನಿವಾಸಿ ಪದ್ಮಯ್ಯ ಗೌಡ ಅವರ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ರೆಖ್ಯ ಬೂಡು ನಿವಾಸಿ ಬಾಲಕೃಷ್ಣ ಎಂಬವರು ಕಾಡು ಹಂದಿಯ ಅಚಾನಕ್ ದಾಳಿಗೆ ತುತ್ತಾಗಿ ಸೊಂಟ, ಕೈ ಹಾಗೂ ಕಾಲು ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರ ಸಹಕಾರದಿಂದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಘಟನೆಯ ಗಂಭೀರತೆಯನ್ನು ಮನಗಂಡ ಅರಣ್ಯ ಇಲಾಖೆ ಪ್ರೊಬೆಷನರಿ ಎ.ಸಿ.ಎಫ್ ಹಸ್ತ ಶೆಟ್ಟಿ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ವಲಯಾರಣ್ಯಾಧಿಕಾರಿ ಸುನಿಲ್ ಹಾಗೂ ಇಲಾಖೆಯ ವಾಹನ ಚಾಲಕ ಕಿಶೋರ್ ಅವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಟದ ಪರಿಸರ, ಹಂದಿಯ ಪ್ರವೇಶ ದಾರಿಗಳು ಹಾಗೂ ಹಾನಿಗೀಡಾದ ಪ್ರದೇಶವನ್ನು ನಿಖರವಾಗಿ ಪರಿಶೀಲಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವೃತವಾಗದಂತೆ ತಕ್ಷಣದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರು ಆಗಾಗ್ಗೆ ಈ ಭಾಗದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಆತಂಕದಲ್ಲಿ ಜೀವನ ನಡೆಸುತ್ತಿದ್ದು, ಈ ಸಂಬಂಧ ಸರಕಾರ ಗಂಭೀರವಾಗಿ ಗಮನ ಹರಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

  •  

Leave a Reply

error: Content is protected !!