ನೆಲ್ಯಾಡಿ ಆಟೋ ರಿಕ್ಷಾ ಚಾಲಕ–ಮಾಲಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಹಾಗೂ ಬೆಳ್ಳಿಹಬ್ಬ ಸಂಭ್ರಮ

ಶೇರ್ ಮಾಡಿ

ನೆಲ್ಯಾಡಿ : ನೆಲ್ಯಾಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಘದ ಬೆಳ್ಳಿ ಹಬ್ಬವನ್ನು ಭಾನುವಾರ ನೆಲ್ಯಾಡಿ ಪೇಟೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಹೊರಠಾಣೆ ಠಾಣಾಧಿಕಾರಿ ಪ್ರವೀಣ್ ಕೆ.ಎಲ್. ಧ್ವಜಾರೋಹಣ ನೆರವೇರಿಸಿ ದೇಶಪ್ರೇಮದ ಸಂದೇಶ ನೀಡಿದರು.

ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಸಂಘವು ಜನರ ಬೇಡಿಕೆಗಳಿಗೆ ಉತ್ತಮ ಸ್ಪಂದನೆ ನೀಡಿ, ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿರುತ್ತದೆ ಎಂದರು.

ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ರಿಕ್ಷಾ ಚಾಲಕ–ಮಾಲಕರ ಸಂಘ, ಈಗ ಬೆಳ್ಳಿ ಹಬ್ಬವನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಗ್ರಾಹಕರಿಗೆ ಸದಾ ಉತ್ತಮ ಸೇವೆ ನೀಡುತ್ತಾ, ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ವೇದಿಕೆಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಗೌಡ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ನೋಟರಿ ವಕೀಲ ಇಸ್ಮಾಯಿಲ್ ಎನ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ಮಾಜಿ ಸೈನಿಕ ಮ್ಯಾಥ್ಯು ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 40 ವರ್ಷಗಳ ಕಾಲ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಸೈನಿಕ ಮ್ಯಾಥ್ಯು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ರಿಕ್ಷಾ ಚಾಲಕ–ಮಾಲಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ತೀರ್ಥೇಶ್ ಉರ್ಮಾನ್ ವಂದಿಸಿದರು.

  •  

Leave a Reply

error: Content is protected !!