

ಕೊಕ್ಕಡ: ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲ ವೈಕುಂಠಪುರ ಇವರ ಆಶ್ರಯದಲ್ಲಿ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಕುಕ್ಕೆಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಪ್ರತ್ಯೇಕ ಕ್ರೀಡಾ ಸ್ಪರ್ಧೆಗಳು ನಡೆಯಿತು. ಮಕ್ಕಳಿಗಾಗಿ ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ ಜನಮೆಚ್ಚುಗೆ ಪಡೆದುಕೊಂಡಿತು. ವಾಲ್ಮೀಕಿ ಆಶ್ರಮ ಶಾಲೆ, ಹೇವಾಜೆ ಕಿ.ಪ್ರಾ.ಶಾಲೆ, ಶಿಶಿಲ ಹಿ.ಪ್ರಾ.ಶಾಲೆ ಹಾಗೂ ಅಂಗನವಾಡಿ ಪುಟಾಣಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನಗಳು ನಡೆದವು.
ಮಂಗಳೂರಿನ ಭರತನಾಟ್ಯ ಕಲಾವಿದೆ ಕು.ವಿಧಾತ್ರಿ ಕೋಣೆಮನೆ ಅವರಿಂದ ಭರತನಾಟ್ಯ ಪ್ರದರ್ಶನ, ನಿತಿನ್ ಬೈರಕಟ್ಟ ಇವರಿಂದ ಉರಗ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಜೆಯ ಸಭಾ ಕಾರ್ಯಕ್ರಮಕ್ಕೆ ಯುವಕಮಂಡಲದ ಅಧ್ಯಕ್ಷ ಹರೀಶ್ ಕೊಳಂಬೆ ಅಧ್ಯಕ್ಷತೆ ವಹಿಸಿದ್ದರು. ಅರಣ್ಯಮಿತ್ರ ಪ್ರಶಸ್ತಿ ಪುರಸ್ಕೃತ ಸಚಿನ್ ಭಿಡೆ ಮುಂಡಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಯುವಕ ಮಂಡಲ ಕೈಗೊಂಡ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ಉದ್ಯಮಿ ದಯಾನಂದ ಶೆಟ್ಟಿ ಮಾತನಾಡಿ ಯುವಕಮಂಡಲ ಸದಸ್ಯರ ಒಗ್ಗಟ್ಟು, ಪರಸ್ಪರ ಸ್ನೇಹ ಹಾಗೂ ಪರೋಪಕಾರ ಮನೋಭಾವವನ್ನು ಪ್ರಶಂಸಿಸಿದರು.
ಸಾಧಕರಿಗೆ ಗೌರವಾರ್ಪಣೆ:
ಕಾರ್ಯಕ್ರಮದ ಸಂದರ್ಭದಲ್ಲಿ ನಾಟಿವೈದ್ಯೆ ಮುತ್ತಮ್, ಅರಣ್ಯಮಿತ್ರ ಪ್ರಶಸ್ತಿ ಪುರಸ್ಕೃತ ಸಚಿನ್ ಭಿಡೆ ಮುಂಡಾಜೆ, ಉದ್ಯಮಿ ದಯಾನಂದ ಶೆಟ್ಟಿ ದಂಪತಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು.
ವೇದಿಕೆಯಲ್ಲಿ ಶಿಶಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಿನ್ ಡಿ., ಕೊಕ್ಕಡ ಗ್ರಾಮ ಆಡಳಿತಾಧಿಕಾರಿ ತೇಜಸ್ವಿ ಹಾಗೂ ಉಮೇಶ್ ಕುಕ್ಕೆಶ್ರೀ ಉಪಸ್ಥಿತರಿದ್ದರು. ನಿತಿನ್ ಬೈರಕಟ್ಟ ಸ್ವಾಗತಿಸಿದರು. ಸುಂದರ ಕೆ. ಪ್ರಾಸ್ತಾವಿಕ ಭಾಷಣ ಮಾಡಿದರು. ರಂಜಿತ್ ಹಾಗೂ ಶರತ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶರತ್ ಭರತ್ ವಂದಿಸಿದರು. ಸತೀಶ್ ಬೆದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಯುವಕ ಮಂಡಲದ ಸರ್ವ ಸದಸ್ಯರು ಸಹಕರಿಸಿದರು.











