ನೆಲ್ಯಾಡಿ-ಪಡುಬೆಟ್ಟುವಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನ ಕಸಿತ ಪ್ರಕರಣಕ್ಕೆ ತೆರೆ – ಸುಳ್ಯ ನಿವಾಸಿ ಅಬ್ದುಲ್ ರೆಹಮಾನ್ ಬಂಧನ – 5 ಲಕ್ಷ ಮೌಲ್ಯದ ಚಿನ್ನ, ಬೈಕ್ ವಶ

ಶೇರ್ ಮಾಡಿ

ನೆಲ್ಯಾಡಿ: ಎರಡೂವರೇ ತಿಂಗಳ ಹಿಂದಿನ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಚಿನ್ನ ಕಸಿತ ಪ್ರಕರಣಕ್ಕೆ ತೆರೆ ಬಿದ್ದಿದ್ದು, ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಳ್ಯ ತಾಲೂಕಿನ ಪೆರಾಜೆ ಅಲೆಟ್ಟಿ ಗ್ರಾಮದ ಶಾಂತಿನಗರ ನಿವಾಸಿ ಅಬ್ದುಲ್ಲ ಅವರ ಪುತ್ರ ಅಬ್ದುಲ್ ರೆಹಮಾನ್ (31) ಬಂಧಿತ ಆರೋಪಿ. ಆರೋಪಿಯಿಂದ ಒಟ್ಟು 5.05 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದ ವಿವರ:
ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಡುಬೆಟ್ಟು ನಿವಾಸಿ ಇಸುಬು ಅವರ ಪತ್ನಿ ಅಲೀಮಮ್ಮ(65) ಅವರು ಜೂನ್ 4ರಂದು ಬೆಳಿಗ್ಗೆ 11.15ಕ್ಕೆ ನೆರೆಯ ಮುದರು ಅಸೌಖ್ಯದಲ್ಲಿದ್ದಾರೆಂಬ ಕಾರಣಕ್ಕೆ ಅವರನ್ನು ವಿಚಾರಿಸಲು ಮನೆಯಿಂದ ಹೊರಟಿದ್ದರು. ಈ ವೇಳೆ ಮನೆಯಿಂದ ಎದುರಿನ ರಸ್ತೆ ದಾಟಲು ನಿಂತಾಗ, ಪಡುಬೆಟ್ಟು ಮುಖ್ಯರಸ್ತೆಯಿಂದ ಮಸೀದಿ ಕಡೆಗೆ ಹೋಗುತ್ತಿದ್ದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕನ್ನು ಅಲೀಮಮ್ಮ ಅವರ ಬಳಿ ನಿಲ್ಲಿಸಿ “ಸಿದ್ದೀಕ್‌ನ ಇಲ್ಲ್ ಓಲು, ಪಳ್ಳಿ ಓಲು” ಎಂದು ತುಳುವಿನಲ್ಲಿ ಮಾತು ಪ್ರಾರಂಭಿಸಿ, ಬೈಕಿನ ಹಿಂಬದಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಒಮ್ಮಲೇ ಬೈಕಿನಿಂದ ಇಳಿದು ಅಲೀಮಮ್ಮ ಅವರ ಕುತ್ತಿಗೆಯಲ್ಲಿದ್ದ ಸುಮಾರು 10 ಪವನ್ ತೂಕದ ಚಿನ್ನದ ಸರವನ್ನು ಎಳೆದೊಯ್ದು ಪರಾರಿಯಾಗಿದ್ದರು.

ಕಸಿದುಕೊಂಡ ಸರದ ಮೌಲ್ಯ ಸುಮಾರು 5.22 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಅಲೀಮಮ್ಮ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ನೆಕ್ಕಿಲಾಡಿಯಲ್ಲಿ ಆರೋಪಿ ಸೆರೆ:
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡ ಉಪ್ಪಿನಂಗಡಿ ಪೊಲೀಸರು ವಿಶೇಷ ತಂಡ ರಚಿಸಿ, ಶೋಧಹಚ್ಚಿ, ಆಗಸ್ಟ್ 17ರಂದು ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಶಕ್ತಿನಗರದಲ್ಲಿ ಆರೋಪಿ ಅಬ್ದುಲ್ ರೆಹಮಾನ್ ಅನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರೋಪಿತನಿಂದ 48 ಗ್ರಾಂ ತೂಕದ 4.54 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ 50 ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ಸದ್ರಿ ಬೈಕ್ ಗೆ ಸಂಬಂಧಿಸಿ ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲೂ ಆರೋಪಿ ವಿರುದ್ಧ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಪತ್ತೆಗೆ ಪೊಲೀಸ್ ಅಧೀಕ್ಷಕರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, ಜಿಲ್ಲಾ ಸಿ.ಡಿ.ಆರ್ ವಿಭಾಗದ ಸಹಕಾರ ದೊರೆತಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್ ಅವರ ನೇತೃತ್ವದಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಅತಿ ಶೀಘ್ರದಲ್ಲಿಯೇ ಆರೋಪಿಯನ್ನು ಪತ್ತೆ ಹಚ್ಚಿ, ಚಿನ್ನವನ್ನು ವಶಪಡಿಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾದ ಉಪ್ಪಿನಂಗಡಿ ಪೋಲಿಸ್ ಅಧಿಕಾರಿಗಳಾದ ರವಿ ಬಿ.ಎಸ್, ಅವಿನಾಶ್ ಎಸ್. ಪಿ, ಸಂತೋಷ್ ಕೆ.ಸಿ, ಹೇಮರಾಜ್, ನಾಗರಾಜ್ ಇವರುಗಳಿಗೆ ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

  •  

Leave a Reply

error: Content is protected !!