

ನೂಜಿಬಾಳ್ತಿಲ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ ಇದರ ಸಂಯುಕ್ತ ಆಶ್ರಯದಲ್ಲಿ ಕಡಬ ತಾಲೂಕು ಮಟ್ಟದ ಪದವಿಪೂರ್ವ ಬಾಲಕ – ಬಾಲಕಿಯರ ಖೋ-ಖೋ ಪಂದ್ಯಾಟವು ಸೋಮವಾರ ದಂದು ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. “ಬೆಥನಿ ವಿದ್ಯಾಸಂಸ್ಥೆಯು ಹಲವು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಾ ಬಂದಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುತ್ತವೆ. ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ನಿಯಮಗಳಿಗೆ ಬದ್ಧರಾಗಿರಬೇಕು,” ಎಂದು ಅವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಸಿ ಮಾತನಾಡಿ, “ಖೋ-ಖೋ ಆಟದ ದೀರ್ಘ ಇತಿಹಾಸವಿದೆ. ಕ್ರೀಡಾಪಟುಗಳು ನಿರ್ಣಯಗಳಿಗೆ ಬದ್ಧರಾಗಿ ಶ್ರೇಷ್ಠ ಆಟವಾಡಬೇಕು. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಕಡಬ ತಾಲೂಕು ಉತ್ತಮ ಫಲಿತಾಂಶ ಪಡೆಯಲಿ,” ಎಂದು ಹಾರೈಸಿದರು. ಹಿರಿಯ ವಿದ್ಯಾರ್ಥಿ ಫಾ.ಫ್ರಾನ್ಸಿಸ್ ತೆಕ್ಕೆ ಪೂಕಳ, ಫಾ. ಅಂಟೋನಿ ಪಡಿಪುರಕ್ಕಲ್ ಹಾಗೂ ಶಾಲಾ ಶಿಕ್ಷಕರ-ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ ಅವರು ಶುಭಾಶಯ ಕೋರಿದರು.
ಸಂಸ್ಥೆಯ ಪ್ರಾಚಾರ್ಯ ಜಾರ್ಜ್ ಟಿ.ಎಸ್. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ತಂಡದ ವ್ಯವಸ್ಥಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯಗುರು ತೋಮಸ್ ಎ.ಕೆ. ವಂದಿಸಿದರು.
ಬಾಲಕರ ವಿಭಾಗದಲ್ಲಿರಾಮಕುಂಜೇಶ್ವರ ಕಾಲೇಜು ಪ್ರಥಮ, ಸುಬ್ರಹ್ಮಣ್ಯ ಕಾಲೇಜು ದ್ವಿತೀಯ ಸ್ಥಾನವನ್ನು, ರಾಮಕುಂಜೇಶ್ವರ ಕಾಲೇಜು ಲವೀತ್ ಉತ್ತಮ ಹಿಡಿತಗಾರ, ರಾಮಕುಂಜೇಶ್ವರ ಕಾಲೇಜು ಹರ್ಷಿತ್ ಉತ್ತಮ ಆಟಗಾರ, ಸುಬ್ರಹ್ಮಣ್ಯ ಕಾಲೇಜು ಮನ್ವಿತ್ ಉತ್ತಮ ಓಟಗಾರ, ಬಾಲಕಿಯರ ವಿಭಾಗದಲ್ಲಿ ಬೆಥನಿ ಪಿ.ಯು.ಕಾಲೇಜು ಪ್ರಥಮ ಸ್ಥಾನ, ರಾಮಕುಂಜೇಶ್ವರ ಕಾಲೇಜು ದ್ವಿತೀಯ ಸ್ಥಾನ, ಬೆಥನಿ ಪಿ.ಯು. ಕಾಲೇಜು ಮೋಕ್ಷ ಉತ್ತಮ ಹಿಡಿತಗಾರ್ತಿ, ಬೆಥನಿ ಪಿ.ಯು. ಕಾಲೇಜು ದಿಶಾ ಉತ್ತಮ ಆಟಗಾರ್ತಿ, ರಾಮಕುಂಜೇಶ್ವರ ಕಾಲೇಜು ಶ್ವೇತಾ ಉತ್ತಮ ಓಟಗಾರ್ತಿ ಆಗಿ ಬಹುಮಾನವನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಪ್ರಾಚಾರ್ಯ ಜಾರ್ಜ್ ಟಿ.ಎಸ್. ಅಧ್ಯಕ್ಷತೆ ವಹಿಸಿದರು, ಗ್ಲೋಬಲ್ ಕ್ರಿಯೆಷನ್ ಬೆಂಗಳೂರು ಸಂಸ್ಥೆಯ ಎಂ.ಡಿ. ಜೋಸ್ ಜಾರ್ಜ್, ಸಂಘದ ಅಧ್ಯಕ್ಷ ರಾಧಾಕೃಷ್ಣ ಸಿ, ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ ಮುಖ್ಯ ಅತಿಥಿಗಳಾಗಿದ್ದರು.
ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಪುನೀತ್ ವಂದಿಸಿದರು.






