


ನೆಲ್ಯಾಡಿ : ಉಪ್ಪಿನಂಗಡಿ ವಲಯ ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟವು ಮಂಗಳವಾರ ರಂದು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜರುಗಿತು.
ಪಂದ್ಯಾಟವನ್ನು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್ ಅವರು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಪೂರಕ. ಇಂತಹ ಸ್ಪರ್ಧೆಗಳು ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ವಲಯದ ನೋಡಲ್ ಅಧಿಕಾರಿ ಕುಶಾಲಪ್ಪ ಜಿ, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಇಕ್ಬಾಲ್, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಎ.ವಿ, ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಿನ್ಸಿಪಾಲ್ ಏಲಿಯಾಸ್ ಎಮ್.ಕೆ, ವಿದ್ಯಾ ಸಂಸ್ಥೆಯ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ, ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಎಂ.ಐ.ತೋಮಸ್, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಹರಿಪ್ರಸಾದ್ ಉಪಸ್ಥಿತರಿದ್ದರು.
ಪಂದ್ಯಾಟದ ಸಮಾರೋಪದಲ್ಲಿ ನೋಟರಿ ವಕೀಲ ಎನ್. ಇಸ್ಮಾಯಿಲ್ ನೆಲ್ಯಾಡಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅಭಿನಂದಿಸಿದರು.
ಬಾಲಕರ ವಿಭಾಗದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಪ್ಪಿನಂಗಡಿ ಪ್ರಥಮ, ಸರಕಾರಿ ಪ್ರೌಢಶಾಲೆ ಶಾಂತಿನಗರ ದ್ವಿತೀಯ ಸ್ಥಾನವನ್ನು ಮಹಮ್ಮದ್ ಸಿನಾನ್ ಉಪ್ಪಿನಂಗಡಿ ಉತ್ತಮ ರೈಡರ್, ಶಾಂತಿನಗರ ಪ್ರೌಢಶಾಲೆಯ ವಿದ್ಯಾರ್ಥಿ ಉತ್ತಮ ಆಲ್‌ರೌಂಡರ್ ಆಗಿ, ಬಾಲಕಿಯರ ವಿಭಾಗದಲ್ಲಿ ಸಂತ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ ಪ್ರಥಮ, ಶ್ರೀರಾಮ ಪ್ರೌಢಶಾಲೆ ಉಪ್ಪಿನಂಗಡಿ ದ್ವಿತೀಯ ಸ್ಥಾನವನ್ನು, ಸಂತ ಜಾರ್ಜ್ ಪ್ರೌಢಶಾಲೆ ಧನುಷಾ ಉತ್ತಮ ಆಲ್‌ರೌಂಡರ್, ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆ ಹೇಮಾವತಿ ಉತ್ತಮ ಕ್ಯಾಚರ್ ಆಗಿ ಬಹುಮಾನವನ್ನು ಪಡೆದುಕೊಂಡರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಕನ್ನಡ ಮಾಧ್ಯಮ ವಿಭಾಗದ ಮುಖ್ಯಗುರು ಎಂ.ಐ. ತೋಮಸ್ ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಕುಮಾರ್ ಟಿ ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ಹಾರಿಸ್ ವಂದಿಸಿದರು.
ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ಫಾ.ನೋಮಿಸ್ ಕುರಿಯಾಕೋಸ್ ಹಾಗೂ ಶಿಕ್ಷಕ–ಶಿಕ್ಷಕೇತರ ವೃಂದದವರು ವಿಜೇತರನ್ನು ಅಭಿನಂದಿಸಿದರು.








