

ಕೊಕ್ಕಡ: ಕೌಕ್ರಾಡಿಯ ಸಂತ ಜೋನರ ದೇವಾಲಯದಲ್ಲಿ ಮಾತೆ ಮರಿಯಮ್ಮರವರ ಜನ್ಮ ದಿನ ಹಾಗೂ ತೆನೆ ಹಬ್ಬವನ್ನು ಭಕ್ತಿಭಾವದ ವಾತಾವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ತೆನೆಗಳನ್ನು ಆಶೀರ್ವದಿಸುವ ಧಾರ್ಮಿಕ ಕಾರ್ಯವನ್ನು ಫಾ.ಅಶೋಕ್ ಡಿ’ಸೋಜಾ ಎಸ್.ವಿ.ಡಿ. ಅವರು ನೆರವೇರಿಸಿದರು. ಬಳಿಕ ಭಕ್ತಾದಿಗಳು ಮಾತೆ ಮರಿಯಮ್ಮರಿಗೆ ಪುಷ್ಪಾರ್ಪಣೆ ಸಲ್ಲಿಸಿದರು. ಸಂಭ್ರಮದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಬಲಿಪೂಜೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.
ಬಲಿಪೂಜೆಯ ಮುಂದಾಳುತ್ವವನ್ನು ಫಾ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ವಹಿಸಿದರು. ಧಾರ್ಮಿಕ ಬೋಧನೆಯೊಂದಿಗೆ ಫಾ.ಅಶೋಕ್ ಡಿ’ಸೋಜಾ ಅವರು ಮಾತೆ ಮರಿಯಮ್ಮರ ಜನ್ಮದಿನ ಹಾಗೂ ತೆನೆ ಹಬ್ಬದ ಸಂದೇಶ ಭಕ್ತರಿಗೆ ಸಾರಿದರು. ಈ ಹಿಂದೆ ನವದಿನಗಳ ಕಾಲ ನಡೆದ ನೊವೇನಾ ಪ್ರಾರ್ಥನೆಗಳಲ್ಲಿ ಭಾಗವಹಿಸಿದ ಮಕ್ಕಳು, ಹಿರಿಯರು ಹಾಗೂ ಹೂವನ್ನು ಅರ್ಪಿಸಿದ ಎಲ್ಲಾ ಭಕ್ತರನ್ನು ಸ್ಮರಿಸಿ ಅಭಿನಂದಿಸಲಾಯಿತು. ಸಿಹಿ ತಿಂಡಿ ಹಾಗೂ ಕಬ್ಬು ನೀಡಿದ ದಾನಿಗಳನ್ನು ಕೂಡಾ ದೇವಾಲಯದ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.
ಬಲಿಪೂಜೆಯ ನಂತರ ದೇವಾಲಯದ ಪಾಲನಾ ಪರಿಷತ್ ಸದಸ್ಯರಿಗೆ ಧರ್ಮಗುರುಗಳಿಂದ ವಿಶೇಷ ಗೌರವ ಸಲ್ಲಿಸಿ ತೆನೆಗಳನ್ನು ವಿತರಿಸಲಾಯಿತು. ನಂತರ ಭಕ್ತಾದಿಗಳಿಗೆ ಆರು ವಾಳ್ಯಗಳ ಗುರಿಕಾರರು ತೆನೆ ಹಂಚಿದರು.
ಹಬ್ಬದ ಅಂಗವಾಗಿ ದೇವಾಲಯದ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಹಾಗೂ ಸಾಮಾಜಿಕ ಸಂವಹನ ಆಯೋಗದಿಂದ ಅಂತರ್ಜಾಲತಾಣದಲ್ಲಿ ಆಯೋಜಿಸಲಾದ ಗಾಯನ ಸ್ಪರ್ಧೆ ಹಾಗೂ ಬಲಿಪೀಠ ಸೇವಕರಿಗಾಗಿ ಆಯೋಜಿಸಿದ ಸ್ಪರ್ಧೆಯ ಬಹುಮಾನ ವಿತರಣೆಯೂ ನೆರವೇರಿತು. ವಿಜೇತರಾದವರಿಗೂ ಭಾಗವಹಿಸಿದವರಿಗೂ ಬಹುಮಾನ ನೀಡಲಾಯಿತು.
ಐಸಿವೈಎಂ ಸದಸ್ಯರು ಭಕ್ತಾದಿಗಳಿಗೆ ಕಬ್ಬು ವಿತರಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಶೋಭೆ ತಂದರು. ಮಾತೆ ಮರಿಯಮ್ಮರ ಜನ್ಮ ದಿನಾಚರಣೆ ಹಾಗೂ ತೆನೆ ಹಬ್ಬದ ವೈಭವದಲ್ಲಿ ಸಂತ ಜೋನರ ದೇವಾಲಯದ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.






